

ಮಂಜುನಾಥ ಅಂಗಡಿ ಧಾರವಾಡ
`ರೋಹಿಣಿ ಮಳೆಯಾದರೆ ಓಣಿ ತುಂಬ ಕಾಳು' ಎಂಬ ಮಾತು ಹಳ್ಳಿಗಳಲ್ಲಿ ಜನಜನಿತ. ಅಂದರೆ ರೈತರು ಮುಂಗಾರು ಹಂಗಾಮು ಆರಂಭಕ್ಕೆ ಭೂಮಿ ಹಸಿಯಾಗಲು, ತೇವಾಂಶ ಹಿಡಿದಿಟ್ಟುಕೊಳ್ಳಲು ಹಾಗೂ ಬಿತ್ತನೆಗೆ ರೋಹಿಣಿ ಮಳೆ ಅತ್ಯಂತ ಪ್ರಯೋಜನಕಾರಿ. ಆದರೆ, ಈ ಬಾರಿ ರೋಹಿಣಿ ಕೈ ಕೊಟ್ಟ ಕಾರಣ ರೈತರು ಮೃಗಶಿರ (ಮಿರಗ) ಮಳೆಯ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಶೇAಗಾ, ಸೋಯಾಬಿನ್, ಹೆಸರು, ಉದ್ದು, ಗೋವಿನಜೋಳ, ಭತ್ತ, ಹತ್ತಿ, ಆಲೂಗಡ್ಡೆ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು. ಕೃಷಿ ಇಲಾಖೆಯ ಅಂಕಿ- ಸಂಖ್ಯೆಯ ಅನ್ವಯ ಈ ಬಾರಿ ಜಿಲ್ಲೆಯಲ್ಲಿ ೨.೭೩ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಕಡಿಮೆ ಖರ್ಚಿನ ಬೆಳೆ ಎನ್ನಲಾಗಿರುವ ಸೋಯಾಬಿನ್ ಹೆಚ್ಚು ಬಿತ್ತನೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಕೃಷಿ ಇಲಾಖೆ ೧೫,೦೦೦ ಕ್ವಿಂಟಲ್ ಸೋಯಾಬಿನ್ ಬೀಜ ದಾಸ್ತಾನು ಮಾಡಿಕೊಂಡಿದೆ. ೧,೬೦೦ ಕ್ವಿಂಟಲ್ ಹೆಸರು, ೨,೦೦೦ ಕ್ವಿಂಟಲ್ ಮೆಕ್ಕೆಜೋಳ, ೫೦೦ ಕ್ವಿಂಟಲ್ ಉದ್ದು ಬೀಜ ಸೇರಿ ವಿವಿಧ ಬೆಳೆಗಳ ಅಂದಾಜು ೨೦,೦೦೦ ಕ್ವಿಂಟಲ್ ಬಿತ್ತನೆ ಬೀಜ ಹಾಗೂ ೩೫,೬೯೬ ಟನ್ ರಸಗೊಬ್ಬರ ದಾಸ್ತಾನಿದೆ.
ಕೆಲ ರೈತರು ಈಗಾಗಲೇ ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದ್ದಾರೆ. ಮೇ ಅಂತ್ಯಕ್ಕೆ ಜಮೀನು ಹದಗೊಳಿಸುವ ಕಾರ್ಯ ಮಾಡಿದ್ದಾರೆ. ಆದರೆ, ರೋಹಿಣಿ ಮಳೆ ಭೂಮಿಯನ್ನು ಹದಗೊಳಿಸುವಷ್ಟು ಪ್ರಮಾಣ ಆಗಿಲ್ಲ. ಅಲ್ಲದೆ, ಭೂಮಿ ತೇವಾಂಶ ಹಿಡಿದಿಟ್ಟುಕೊಂಡಿಲ್ಲ. ಹೀಗಾಗಿ ಬಿತ್ತನೆಗೆ ಸಮರ್ಪಕ ಮಳೆಯಾಗಿಲ್ಲ. ರೋಹಿಣಿ ಮಳೆಯ ಅವಽ ಜೂ. ೮ರವರೆಗೆ ಇದ್ದು, ನಂತರ ಮೃಗಶಿರ ಮಳೆಯ ಆಗಮನವಾಗಲಿದೆ. ಅದು ೧೫ ದಿನ ಇರಲಿದ್ದು, ಭೂಮಿ ಹಸಿಯಾಗಲು ಹಾಗೂ ಬಿತ್ತನೆಗೆ ಪೂರಕ ಮಳೆಯಾಗಲಿ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.
ಪ್ರತಿವರ್ಷ ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆಯ ಪ್ರವೇಶವಾಗುತ್ತಿತ್ತು. ಆದರೆ, ಈ ಬಾರಿ ಜೂ. ೪ಕ್ಕೆ ಕೇರಳ ತಲುಪುವ ಸಾಧ್ಯತೆ ಇದೆ. ಹೀಗಾಗಿ ಕರ್ನಾಟಕಕ್ಕೆ ಜೂ. ೮ರ ನಂತರ ಮುಂಗಾರು ಪ್ರವೇಶಿಸಲಿದೆ. ಜೂನ್ ಅಂತ್ಯಕ್ಕೆ ಸರಾಸರಿ ಮಳೆಯಾಗುವ ನಿರೀಕ್ಷೆ ಇದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕಡಿಮೆ ಮಳೆಯಾಗಲಿದ್ದು, ಅದಕ್ಕೆ ತಕ್ಕ ಬೆಳೆಗಳನ್ನು ಬಿತ್ತುವುದು ಸೂಕ್ತ.
ಪ್ರಸಕ್ತ ಮುಂಗಾರು ಹಂಗಾಮಿಗೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರೋಹಿಣಿ ಮಳೆ ಎಲ್ಲ ಬೆಳೆಗಳ ಬಿತ್ತನೆ ಮತ್ತು ಭೂಮಿಯ ತೇವಾಂಶಕ್ಕೆ ಸೂಕ್ತ. ಆದರೆ, ಈ ಬಾರಿ ರೋಹಿಣಿ ಮಳೆ ಸಮರ್ಪಕವಾಗಿ ಆಗದ ಕಾರಣ ಇನ್ನೂ ಬಿತ್ತನೆ ಚುರುಕುಗೊಂಡಿಲ್ಲ. ರೈತರು ಮೃಗಶಿರ ಮಳೆಯ ನಿರೀಕ್ಷೆಯಲ್ಲಿದ್ದಾರೆ.