ಜು.19ರಿಂದ ಮಂಡ್ಯ ಜಿಲ್ಲೆಯಲ್ಲಿ ತುಂತುರು ಮಳೆ ನಿರೀಕ್ಷೆ

Rain
Transparent umbrella under heavy rain against water drops splash background. Rainy weather concept.
Published on

ಮಂಡ್ಯ: ಜಿಲ್ಲೆಯಲ್ಲಿ ಜು.19ರಿಂದ 23ರವರೆಗೆ ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ವರದಿ ನೀಡಿರುವ ಮೈಸೂರು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಕ್ಷೇತ್ರ ವಿಭಾಗ, ಈ ಅವಧಿಯಲ್ಲಿ ಗರಿಷ್ಟ 30 ಡಿಗ್ರಿ ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬಹುದು. ಗಾಳಿಯ ವೇಗ ಪ್ರತಿ ಗಂಟೆಗೆ 3 ರಿಂದ 4 ಕಿ.ಮೀ ವೇಗದಲ್ಲಿ ಬೀಸುವ ಸಂಭವವಿದೆ ಎಂದು ತಿಳಿಸಿದೆ.

ಮಳೆಯ ಅಭಾವವಿರುವುದರಿಂದ ಮಧ್ಯಮಾವಧಿ ಭತ್ತದ ತಳಿಗೆ ಆದ್ಯತೆ ನೀಡುವುದರ ಜತೆಗೆ ಶ್ರೀ ಪದ್ಧತಿ/ಡ್ರಮ್ ಸೀಡರ್ ಬಳಸಬಹುದು. ಇನ್ನು ಬದನೆಕಾಯಿ ಬೆಳೆಗೆ ಸುಳಿ ಮತ್ತು ಕಾಯಿಕೊರಕದ ಸಮಸ್ಯೆ ಎದುರಾಗಬಹುದು. ಮರಿಹುಳು ಕಾಯಿ ಬರುವ ಮುನ್ನವೇ ಸುಳಿಯನ್ನು ಕೊರೆಯುತ್ತದೆ. ಕೊರೆದ ಭಾಗದಲ್ಲಿ ಸಣ್ಣ ರಂಧ್ರವುಂಟಾಗಿ ಸುಳಿ ಬಾಡುತ್ತದೆ. ಕಾಯಿಗಳಲ್ಲಿ ರಂಧ್ರದಿಂದ ಹುಳುಗಳ ಮಲ ಹೊರಬರುತ್ತಿರುತ್ತವೆ. ಆದ್ದರಿಂದ ಸಸಿ ನಾಟಿ ಮಾಡುವಾಗ ಎಕರೆಗೆ 250 ಕಿಗ್ರಾಂ ಬೇವಿನಹಿಂಡಿಯನ್ನು ಸಸಿ ನೆಡುವ ಗುಳಿಗಳಲ್ಲಿ ಹಾಕಬೇಕು. ಸುಳಿ ಕೊರೆಯುವ ಹುಳುವಿನ ಬಾಧೆ ಕಂಡುಬಂದಾಗ ಪ್ರತಿ 15 ದಿನಕ್ಕೊಮ್ಮೆ ಮೆಲಾಥಿಯಾನ್ 50 ಇಸಿ, 2.0 ಮಿ.ಲೀ ನೀರಿಗೆ ಸೇರಿಸಿ ಗಿಡಗಳ ಮೇಲೆ ಸಿಂಪರಣೆ ಮಾಡಬಹುದು.

ಅಂತೆಯೇ ಮೆಣಸಿನಕಾಯಿಗೆ ಥ್ರಿಪ್ಸ್ ಮತ್ತು ನುಸಿ ಹರಡಿದರೆ ಕೀಟಗಳು ರಸ ಹೀರುವುದರಿಂದ ಎಲೆಗಳು ಮೇಲ್ಮಖವಾಗಿ ಮತ್ತು ಕೆಳಮುಖವಾಗಿ ಮುದುಡಿಕೊಂಡಿರುತ್ತದೆ. ಉದ್ದವಾದ ತೊಟ್ಟು, ಹಳದಿ ಮಿಶ್ರಿತ ಹಸಿರು ಎಲೆಗಳ ಗಾತ್ರ ಚಿಕ್ಕದಾಗಿರುತ್ತದೆ. ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರ ಹತೋಟಿಗಾಗಿ ಡೈಕೊಪಾಲ್ 18.5 ಇ.ಸಿ, 2.5 ಮಿ.ಲೀ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್, 0.3 ಮಿ.ಲೀ ನೀರಿಗೆ ಸೇರಿಸಿ ಸಿಂಪಡಿಸಬಹುದು ಎಂದು ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net