

ಮಂಡ್ಯ: ಜಿಲ್ಲೆಯಲ್ಲಿ ಜು.5ರಿಂದ 9ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರಿನಿಂದ ಕೂಡಿದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾಹಿತಿಯಂತೆ ವರದಿ ನೀಡಿರುವ ಮೈಸೂರು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗ, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಟ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಅಂತೆಯೇ ಗಾಳಿಯು ಪ್ರತಿ ಗಂಟೆಗೆ 6 ರಿಂದ 8 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ವಿವರಿಸಿದೆ.
ಇನ್ನು ಟೊಮ್ಯಾಟೊ ಬೆಳೆಗೆ ಕಾಯಿಕೊರಕ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಶೇ.10ರಷ್ಟು ಚಿಹ್ನೆ ಕಂಡುಬಂದಲ್ಲಿ ಶೇ.4ರಷ್ಟು ಬೇವಿನ ಕಷಾಯ ಸಿಂಪಡಿಸಬೇಕು. ಅಥವಾ 100 ಎಲ್.ಇ.ಎಚ್.ಎ.ಎನ್.ಪಿ.ವಿ ನಂಜಾಣು ಸಿಂಪರಣೆ ಮಾಡಬೇಕು. ಅಂತೆಯೇ ಎಲೆಕೋಸಿಗೆ ವಜ್ರ ಗುರುತಿನ ಬೆನ್ನಿನ ಪತಂಗ ಹರಡುವ ಸಾಧ್ಯತೆ ಇರುವುದರಿಂದ ನಾಟಿ ಮಾಡುವ ಕ್ಷೇತ್ರದಲ್ಲಿ 15 ದಿನ ಮುಂಚಿತವಾಗಿ ಪ್ರತಿ 25 ಸಾಲು ಎಲೆಕೋಸು ಸಾಲುಗಳಿಗೆ ಒಂದು ಸಾಲು ಸಾಸಿವೆ ಮತ್ತು ನಾಟಿ ಮಾಡಿದ 15 ರಿಂದ 25 ದಿನದ ನಂತರ ಮತ್ತೊಂದು ಸಾಲು ಸಾಸಿವೆ ಬಿತ್ತನೆ ಮಾಡುವುದು ಸೂಕ್ತ. ಸಾಸಿವೆ ಬೆಳೆಗೆ ಹೆಚ್ಚಿನ ಎಲೆಕೋಸು ಕೀಟಗಳು ಆಕರ್ಷಿಸಲ್ಪಡುತ್ತದೆ. ಸಾಸಿವೆ ಎಲೆಗಳ ಮೇಲೆ 0.75 ಮಿ.ಲೀ ಇಂಡೋಕ್ಸಾಕಾರ್ಬ್ ಶೇ.14.50 ಎಸ್‌ಸಿ ಅಥವಾ 1 ಮಿ.ಲೀ ಸ್ಪಿನೋಸಾಡ್ ಶೇ.02.50 ಎಸ್‌ಸಿ ಎಂಬ ಕೀಟನಾಶಕವನ್ನು 1 ಲೀ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು. ಗೆಡ್ಡೆ ಕಂಟುವ ಹಂತದಲ್ಲಿ ಹುಳುವಿನ ಬಾಧೆ ಕಂಡುಬಂದಲ್ಲಿ 0.75 ಮಿ.ಲೀ ಇಂಡೋಕ್ಸಾಕಾರ್ಬ್ ಶೇ.14.50 ಎಸ್‌ಸಿ ಅಥವಾ 1 ಮಿ.ಲೀ ಸ್ಪಿನೋಸಾಡ್ ಶೇ.02.50 ಎಸ್‌ಸಿ ಕೀಟನಾಶವನ್ನು 1 ಲೀ ನೀರಿನಲ್ಲಿ ಸೇರಿಸಿ ಸಿಂಪಡಿಸಬಹುದು.
ಬೆಂಡೆ ಬೆಳೆಗೆ ರಸಹೀರುವ ಕೀಟ ಬಾಧಿಸಿದರೆ ಅಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ, 1.3 ಮಿ.ಲೀ ನೀರಿಗೆ, 325 ರಿಂದ 390 ಮಿ.ಲೀ ಎಕರೆಗೆ ಬಿತ್ತನೆಯಾದ 2 ವಾರದ ನಂತರ ಎಕರೆಗೆ 250 ರಿಂದ 300 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. ಇನ್ನು ಕಬ್ಬು ತರಗನ್ನು ನಿರ್ವಹಣೆ ಮಾಡುವ ಸಂಬಂಧ ಕಟಾವು ಮುಗಿದ ನಂತರ ಗರಿ ಅಥವಾ ತರಗನ್ನು ಜಮೀನಿನಲ್ಲೇ ಪರ್ಯಾಯ ಸಾಲುಗಳಲ್ಲಿ ಹರಡಿ ನೀರು ಹಾಯಿಸಿ. ಬಳಿಕ ಎಕರೆಗೆ 15 ಕಿ.ಗ್ರಾಂ ಯೂರಿಯಾವನ್ನು ಬೆರೆಸಿದ ಶೇ.5ರಷ್ಟು ಸಗಣಿ ಬಗ್ಗಡವನ್ನು ಚಿಮುಕಿಸಬೇಕು. ಪ್ಲೊರೋಟಸ್ ಸೂಕ್ಷಾಣು ಜೀವಿಯನ್ನು ಎಕರೆಗೆ 4 ಕಿ.ಗ್ರಾಂ ಪ್ರಮಾಣದಲ್ಲಿ ಅಥವಾ ಎಕರೆಗೆ 1 ರಿಂದ 1.5 ಟನ್ ಸಕ್ಕರೆ ಕಾರ್ಖಾನೆ ಮಡ್ಡಿಗೊಬ್ಬರ ಹರಡುವುದರಿಂದ ತರಗನ್ನು ತ್ವರಿತವಾಗಿ ಕಳೆಯಿಸಬಹುದೆಂದು ಸಲಹೆ ನೀಡಿದೆ.