ಗುಣಮಟ್ಟದ ಸೇವೆ ನಿರೀಕ್ಷೆ

C.A. Event
Published on

ಹುಬ್ಬಳ್ಳಿ: ಸಹಕಾರ ಇಲಾಖೆಗೆ ಲೆಕ್ಕ ಪರಿಶೋಧಕರ ಸಹಕಾರ ಅಗತ್ಯ. ಅವರಿಂದ ಇಲಾಖೆಯು ಗುಣಮಟ್ಟದ ಸೇವೆಯನ್ನು ನಿರೀಕ್ಷಿಸುತ್ತದೆ ಎಂದು ಇಲಾಖೆಯ ಧಾರವಾಡ ವಿಭಾಗದ ಉಪ ನಿರ್ದೇಶಕ ಆರ್. ತೇಜೋಮೂರ್ತಿ ಹೇಳಿದರು.

ನಗರದ ಕೇಶ್ವಾಪುರದಲ್ಲಿರುವ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಹಕಾರ ಸಂಘಗಳ ಆಡಿಟ್ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಕೃಷಿ, ಸೌಹಾರ್ದ ಹಾಗೂ ಪತ್ತಿನ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ವರದಿ ಸಲ್ಲಿಕೆ ವ್ಯವಸ್ಥೆಯನ್ನು ನವೀಕೃತಗೊಳಿಸಲಾಗಿದ್ದು, ಸಹಕಾರ ಸಂಘಗಳ ಹಣಕಾಸಿನ ಸ್ಥಿತಿಯ ಬಗ್ಗೆ ಸವಿಸ್ತಾರವಾದ ಮಾಹಿತಿ ಪಡೆಯಲು ಸರ್ಕಾರ ಇಚ್ಛಿಸುತ್ತಿದೆ ಎಂದರು.

ಲಭ್ಯವಾಗುವ ಸಹಕಾರ ಸಂಘಗಳ ಪ್ರಚಲಿತ ಹಣಕಾಸು ಸ್ಥಿತಿಯ ನಿಖರವಾದ ಮಾಹಿತಿಯಿಂದ ಆರ್ಥಿಕ ಶಿಸ್ತನ್ನು ಅಳವಡಿಸಲು ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ ಎಂದರು.

ತಾಂತ್ರಿಕ ಅಧಿವೇಶನದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡ ಸಹಕಾರ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಕೆ .ರಾಮಪ್ಪ, 1959ರ ಸಹಕಾರ ಕಾಯ್ದೆಯ ಬಗ್ಗೆ ವಿವರಿಸಿದರು.

ಬಳ್ಳಾರಿಯ ಹಿರಿಯ ಲೆಕ್ಕ ಪರಿಶೋಧಕ ಶಿ . ಎರಿಸ್ವಾಮಿ ಪರಿಷ್ಕೃತ ವರದಿ ಸಲ್ಲಿಕೆ ಬಗ್ಗೆ, ಲೆಕ್ಕ ಪರಿಶೋಧಕರಾದ ಕಪಿಲ ಭಂಡಾರಕರ್ ಹಾಗೂ ಕಾರ್ತಿಕ ಶೆಟ್ಟಿ ಜಿಎಸ್‌ಟಿ ಕಾಯ್ದೆ ಅಡಿ ವ್ಯಾಜ್ಯಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಮಲ್ಲಿಕಾರ್ಜುನ ಪಿಸೆ ಸ್ವಾಗತಿಸಿದರು. ಕಾರ್ಯದರ್ಶಿ ಧನಪಾಲ್ ಮುನ್ನೋಳಿ ವಂದಿಸಿದರು. ಸುಮಾರು 150 ಲೆಕ್ಕಪರಿಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net