

ಮೈಸೂರು: ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಳಚರಂಡಿ ಸಹಾಯಕರು, ಲೋಡರ್ಸ್ ಮತ್ತು ಕ್ಲೀನರ್ಸ್ ಗಳನ್ನು ಕಾಯಂಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ ಹೇಳಿದರು.
ರಾಜ್ಯದ ನಗರ ಪಾಲಿಕೆಗಳಲ್ಲಿ 481 ಲೋಡರ್ಸ್‌ಗಳು, 294 ಕ್ಲೀನರ್ಸ್‌ಗಳು, 544 ಒಳಚರಂಡಿ ಸಹಾಯಕರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಗುತ್ತಿಗೆದಾರರಿಂದ ಆಗುತ್ತಿರುವ ಶೋಷಣೆ ತಪ್ಪಿಸಲು ಇವರನ್ನು ಸರ್ಕಾರ ನೇರ ನೇಮಕಾತಿ ಮಾಡಿಕೊಳ್ಳಬೇಕು ಅಥವಾ ನೇರ ವೇತನ ಪಾವತಿ ವ್ಯವಸ್ಥೆಗೆ ತರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕರಾತ್ಮಕವಾಗಿ ಸ್ಪಂದಿಸಿದ್ದು, ಒಳಚರಂಡಿ ಸಹಾಯಕರು, ಲೋಡರ್ಸ್ ಮತ್ತು ಕ್ಲೀನರ್ಸ್‌ಗಳನ್ನು ಸ್ವಚ್ಛತಾ ಕಾರ್ಮಿಕರೆಂದು ಪರಿಗಣಿಸಿ ಅವರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ನೇರ ನೇಮಕಾತಿ ವಿಚಾರವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪಳನಿ, ಆರ್. ಶಿವ, ಎಸ್. ನಾಗರಾಜು, ಆರ್. ರಾಜು, ಎಂ.ಕೆ. ಮಹದೇವ, ಜಯಸಿಂಹ ಮಂಜು, ಲಕ್ಷ್ಮಣ್ ಇದ್ದರು.