

ತುಮಕೂರು: ಕರೊನಾ ತಡೆಗಟ್ಟಲು ನಡೆಸುತ್ತಿರುವ ಹೋರಾಟದಲ್ಲಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಕೇಂದ್ರ ಸರ್ಕಾರದಿಂದ ಸೈ ಎನಿಸಿಕೊಂಡಿರುವ ತುಮಕೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ICMCC) ಬಹುಮುಖ್ಯ ಪಾತ್ರವಹಿಸುತ್ತಿದೆ.
ಈ ಕಂಟ್ರೋಲ್ ಸೆಂಟರ್ ಸಾಂಕ್ರಾಮಿಕ ಹಾಗೂ ದುರಂತಗಳ ಸಮಯದಲ್ಲಿ ನಿರ್ಣಾಯಕ ಪಾತ್ರವಹಿಸುವುದರಿಂದ ಕರೊನಾ ಮಾನಿಟರಿಂಗ್ ಹಾಗೂ ಕಂಟೈನ್ಮೆಂಟ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯ ಕಂಟ್ರೋಲ್ ಕೇಂದ್ರದ ಸೇವೆಯು ತುಮಕೂರು ನಗರಕ್ಕೆ ಸೀಮಿತವಾಗಿದ್ದರೂ ಕರೊನಾ ನಿಯಂತ್ರಣದ ಸಲುವಾಗಿ ಕಂಟ್ರೋಲ್ ಕೇಂದ್ರದ ಸೇವೆಯನ್ನು ಜಿಲ್ಲೆಗೂ ವಿಸ್ತರಣೆ ಮಾಡಲಾಗಿದೆ.
ಜಿಐಎಸ್‌ನಲ್ಲಿ ಅಳವಡಿಕೆ: ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನೆರವಿನಿಂದ ಜಿಲ್ಲೆಯಲ್ಲಿ ಕ್ವಾರಂಟೈನ್ ಆದ ಶಂಕಿತರ ವಿವರಗಳನ್ನು ಜಿಐಎಸ್‌ನಲ್ಲಿ ಲೇಯರ್‌ಗಳಾಗಿ ಅಳವಡಿಸಲಾಗಿದೆ. ಜಿಐಎಸ್‌ನಲ್ಲಿ ಅಳವಡಿಸಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಲ್ಲಿ ಪ್ರಕರಣದ ವಿಶ್ಲೇಷಣೆ ಹಾಗೂ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲು ಉಪಯೋಗವಾಗುತ್ತದೆ.ಬಣ್ಣಗಳಿಂದ ಮ್ಯಾಪಿಂಗ್: ಕಂಟ್ರೋಲ್ ಸೆಂಟರ್ ಸಹಾಯದಿಂದ ಶಂಕಿತರೆಂದು ಗುರುತಿಸಿ ಕ್ವಾರಂಟೈನ್‌ನಲ್ಲಿರುವವರನ್ನು ಜಿಯೋ ಮ್ಯಾಪಿಂಗ್ ಮಾಡಲಾಗಿದೆ.
ಪ್ರಮುಖವಾಗಿ ವಿದೇಶದಿಂದ ಹಿಂದಿರುಗಿದವರು ಹಾಗೂ ಕರೊನಾ ಸೋಂಕು ಉಳ್ಳವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ವಿವರಗಳನ್ನೂ ಮ್ಯಾಪಿಂಗ್ ಮಾಡಲಾಗಿದೆ. ವ್ಯಕ್ತಿಗಳ ಆರೋಗ್ಯ ಸ್ಥಿತಿ ಹಾಗೂ ಕ್ವಾರಂಟೈನ್‌ನಲ್ಲಿ ಕಳೆದಿರುವ ದಿನಗಳ ಪ್ರಮಾಣದ ಆಧಾರದಲ್ಲಿ ಈ ಮ್ಯಾಪಿಂಗ್ ಮಾಡಲಾಗಿದೆ. ಅವುಗಳನ್ನು ಸುಲಭವಾಗಿ ಗುರುತಿಸಲು ವಿಭಿನ್ನ ಬಣ್ಣದ ಸಂಕೇತಗಳನ್ನು ಬಳಸಲಾಗಿದೆ. ಜಿಯೋ ಮ್ಯಾಪಿಂಗ್‌ನಿಂದ ಬಣ್ಣದ ಸಂಕೇತ (ಕಲರ್ ಕೋಡ್)ಗಳನ್ನು ಉಪಯೋಗಿಸಿ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯ ವಿವಿಧ ಹಂತಗಳನ್ನು ಪತ್ತೆ ಮಾಡಬಹುದು. ವ್ಯಕ್ತಿಯು ಎಷ್ಟು ದಿವಸ ಕ್ವಾರಂಟೈನ್‌ನಲ್ಲಿದ್ದಾನೆ ಎಂಬುದರ ಆಧಾರದಲ್ಲಿ ಬಣ್ಣ ಬದಲಾಗುತ್ತದೆ.
ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳಲ್ಲಿ ಯಾರಿಗಾದರೂ ಪಾಸಿಟಿವ್ ಎಂದು ದೃಢಪಟ್ಟಲ್ಲಿ ಜಿಐಎಸ್ ಸಾಫ್ಟ್‌ವೇರ್‌ನಿಂದ ಪತ್ತೆ ಹಚ್ಚಿ ನಿಷೇಧಿತ ಹಾಗೂ ನಿರ್ಬಂಧಿತ ಪ್ರದೇಶವೆಂದು ಘೋಷಿಸಲು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗುತ್ತದೆ. ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಮೇಲೆ ನಿಗಾವಹಿಸಲೂ ಸಹ ಅನುಕೂಲವಾಗಲಿದೆ. ಪಾಸಿಟಿವ್ ಕಂಡು ಬಂದ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕುವಲ್ಲಿಯೂ ಈ ಮ್ಯಾಪಿಂಗ್ ನೆರವಾಗಲಿದೆಯಲ್ಲದೆ ಅಗತ್ಯ ಕ್ರಮ ಕೈಗೊಂಡು ರೋಗ ಹರಡುವುದನ್ನು ತಡೆಯಬಹುದು. ಇದರೊಂದಿಗೆ ನಿಷ್ಕ್ರಿಯ ಕಣ್ಗಾವಲು ಕ್ರಿಯೆಯನ್ನೂ ಸಹ ಏಕಕಾಲದಲ್ಲಿ ತೆಗೆದುಕೊಳ್ಳಬಹುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಎರಡನ್ನೂ ಈಗಾಗಲೇ ಜಿಐಎಸ್ ಮ್ಯಾಪಿಂಗ್ ಮಾಡಲಾಗಿದ್ದು, ಕಂಟ್ರೋಲ್ ಸೆಂಟರ್‌ನ ನೈಜ ಸಮಯದ ಆಧಾರದಲ್ಲಿ ಶಂಕಿತ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗುವುದು.
ಮೈ ಮ್ಯಾಪ್ಸ್‌ನಲ್ಲಿ ಮಾಹಿತಿ : ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಆಗಿರುವ ಪ್ರತಿಯೊಬ್ಬ ವ್ಯಕ್ತಿಯ ಜಿಇಒ ಮ್ಯಾಪಿಂಗ್ ಅನ್ನು ಮೈ ಮ್ಯಾಪ್ಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮ್ಯಾಪ್ ಮಾಡಿದ್ದು, ಇದರಲ್ಲಿ ಕ್ವಾರಂಟೈನ್ ಆದ ವ್ಯಕ್ತಿಗಳ ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ, ಯಾವ ದೇಶದಿಂದ ಬಂದಿದ್ದಾರೆ ಎನ್ನುವ ಮಾಹಿತಿ, ದಿನಾಂಕ, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕ್ವಾರಂಟೈನ್‌ನಲ್ಲಿ ಕಳೆದಿರುವ ದಿನಗಳ ವಿವರಗಳು ಅಪ್‌ಲೋಡ್ ಆಗಿರುತ್ತದೆ.
ಹಾಲು ವಿತರಣೆಯಲ್ಲಿ ಲೋಪಕ್ಕೆ ಕಠಿಣ ಕ್ರಮ : ಕರೊನಾ ಹಿನ್ನೆಲೆಯಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಾಗೂ ಬಡವರಿಗೆ ಉಚಿತವಾಗಿ ವಿತರಿಸುತ್ತಿರುವ ಹಾಲನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಏ.14ರವರೆಗೆ ಉಚಿತವಾಗಿ ಹಾಲು ವಿತರಿಸಲಾಗುತ್ತಿದ್ದು, ಪ್ರತಿದಿನ 25 ಸಾವಿರ ಲೀಟರ್ ಹಾಲನ್ನು ಜಿಲ್ಲೆಯಲ್ಲಿ ಬಡವರಿಗೆ ನೀಡಲಾಗುತ್ತಿದೆ. ಮಾರಾಟಕ್ಕಿಲ್ಲ ಎಂಬ ಮುದ್ರಿತ ಪ್ಯಾಕೇಟ್‌ಗಳಿಗೆ ಹಣ ಪಡೆದಲ್ಲಿ ಜಿಲ್ಲಾಡಳಿತ ಅಥವಾ ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ದೂರವಾಣಿ ಸಂಖ್ಯೆ: 7760536536 ದೂರು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಲೈಸೆನ್ಸ್ ಅಮಾನತು: ಪಡಿತರ ವಿತರಣೆ ಮಾಡದ ತುಮಕೂರಿನ ಚಿಕ್ಕಪೇಟೆಯ ನ್ಯಾಯಬೆಲೆ ಅಂಗಡಿ ಸಂಖ್ಯೆ 250ರ ಲೈಸೆನ್ಸ್ ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಏ.7 ರಂದು ಟಿಎಪಿಸಿಎಂಎಸ್ ಸಗಟು ಮಳಿಗೆಯಿಂದ ಪಡಿತರ ಎತ್ತುವಳಿ ಮಾಡಿದ್ದರೂ ಸಹ, ಗುರುವಾರ ಮಧ್ಯಾಹ್ನ ದವರೆಗೂ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಣೆ ಮಾಡಿರಲಿಲ್ಲ.
ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನ ಸಾಮರ್ಥ್ಯ ಮತ್ತು ತಂತ್ರಜ್ಞಾನ ಬಳಸಿಕೊಂಡು ಕರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬಹುದು. ಪ್ರಸ್ತುತ ವೈದ್ಯಕೀಯ ಸೌಕರ್ಯಗಳೊಂದಿಗೆ ಐಸಿಎಂಸಿಸಿ ಸಾಮರ್ಥ್ಯ ಹಾಗೂ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ಪರಿಹಾರಗಳನ್ನು ಕಂಡುಕೊಳ್ಳಬಹುದು. ಟಿ.ಭೂಬಾಲನ್ ಸ್ಮಾರ್ಟ್‌ಸಿಟಿ ಲಿ., ಎಂಡಿ