

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ ಕೆ.ಸುಧಾಕರ್ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಹೊಂದಿದ್ದರು. ಆದರೆ, ಪಾಪ ಇದಾಗಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಆಡಳಿತದಾವಧಿಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಎರಡು ಪ್ರಬಲ ಸಚಿವ ಸ್ಥಾನದ ಖಾತೆಯನ್ನು ಸುಧಾಕರ್ ಹೊಂದಿದ್ದರು. ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಿಸಿದ್ದಾರೆ. ಆದರೆ, ಇದಕ್ಕೆ ಮೊದಲು ನಿಗದಿಯಾಗಿದ್ದ 521 ಕೋಟಿ ರೂಗಳ ಕ್ರಿಯಾಯೋಜನೆ ನಿರ್ವಹಣೆ ವೆಚ್ಚದಿಂದ 820 ಕೋಟಿ ರೂಗಳಿಗೆ ಏರಿಸಲಾಯಿತು. ಎಲ್ಲವೂ ದುಬಾರಿಯಾಗಿದೆ. ಇದಕ್ಕೆ ಅನುಮೋದನೆ ಪಡೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. .
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಈಗಲೂ ಎಂಆರ್‌ಐ ಸ್ಕ್ಯಾನ್ ಸೆಂಟರ್ ಇಲ್ಲ. ಹಿಂದೆ ಇದರ ಬಗ್ಗೆ ಆರೋಗ್ಯ ಸಚಿವರು ಏಕೆ ಗಮನಹರಿಸಲಿಲ್ಲ. ಅವರ ಅವಧಿಯಲ್ಲಿ ಸಾರ್ವಜನಿಕ ಆಸ್ಪತ್ರೆಯು ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದಿದೆ ಎಂಬ ನಿರೀಕ್ಷೆಯಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆಯನ್ನು ಪರಿಶೀಲಿಸಲಿಲ್ಲ. ಒಂದು ವೇಳೆ ತಾವು ವೀಕ್ಷಿಸಿ, ಸಮಸ್ಯೆಗಳನ್ನು ಪ್ರಸ್ತಾಪಿಸಿ ಟೀಕಿಸಿದ್ದಲ್ಲಿ ಮತ್ತೆ ಸುಧಾಕರ್ ವಿದೇಶಕ್ಕೆ ಹೊರಟು ಬಿಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ವಸತಿ ರಹಿತರಿಗೆ ನಿವೇಶನಕ್ಕೆ ಹಂಚಿಕೆಗೆ ಸಂಬಂಧಿಸಿದಂತೆ ಅನಧಿಕೃತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ, ಭೂಮಿ ಮಂಜೂರಾತಿ, ಲೇಔಟ್ ನಿರ್ಮಾಣ, ನಿವೇಶನ ವಿಂಗಡನೆ ಸೇರಿದಂತೆ ಯಾವುದೇ ಕೆಲಸಗಳಾಗಿಲ್ಲ. ದಾಖಲೆಯನ್ನು ನೋಡಿಕೊಂಡು ಫಲಾನುಭವಿಗಳು ಸ್ಥಳಕ್ಕೆ ಹೋದಾಗ ಗಿಡಮರಗಳನ್ನು ನೋಡಿಕೊಂಡು ಬರಬೇಕು. ಇದೇ ಹಿಂದಿನವರ ದೊಡ್ಡ ದಾಖಲೆಯ ಸಾಧನೆ ಎಂದರು.
ಈಗಾಗಲೇ ಕರೊನಾ ನಿರ್ವಹಣೆಯಲ್ಲಿನ ಹಿಂದಿನ ಅವ್ಯವಹಾರ, ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ವಹಣೆ ವೆಚ್ಚ ದಿಢೀರನೇ ಏರಿಕೆ ಸೇರಿದಂತೆ ನಾನಾ ವಿಷಯಗಳಲ್ಲಿ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.