

ಚಿಕ್ಕಬಳ್ಳಾಪುರ: ತೀವ್ರ ಹಣಾಹಣಿಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಚುನಾವಣಾ ಫಲಿತಾಂಶದ ಆವಲೋಕನ ನಿರಂತರವಾಗಿ ಚರ್ಚೆಯಾಗುತ್ತಿದ್ದು ಪಕ್ಷದ ವೇದಿಕೆಯಲ್ಲಿ ಕಮಲನಾಯಕರು ಮತ್ತೆ ಬಹಿರಂಗವಾಗಿ ಸೋಲು ಗೆಲುವಿನ ಕಾರಣಗಳನ್ನು ಕೆದಕಿದ್ದಾರೆ.
ಜನಸಂಪರ್ಕದಿಂದ ದೂರ, ಅತಿಯಾದ ಆತ್ಮವಿಶ್ವಾಸ, ಸ್ವಪಕ್ಷೀಯರ ಅಭಿಪ್ರಾಯ ಸಂಗ್ರಹಿಸದೇ ಅನ್ಯರ ಸೇರ್ಪಡೆ, ಕೈ ಕೊಟ್ಟ ನಿಷ್ಠಾವಂತರ ಪಡೆ, ಅಭಿವೃದ್ಧಿ ಕೆಲಸಗಳ ಪ್ರಚಾರದಲ್ಲಿ ಹಿನ್ನಡೆ, ಶಮನಗೊಳ್ಳದ ಆಂತರಿಕ ಭಿನ್ನಮತ ಸೇರಿದಂತೆ ವಿಚಾರಗಳನ್ನು ಪ್ರಸ್ತಾಪಿಸಿ, ಧೋರಣೆಗಳ ಬದಲಾವಣೆಯ ಅಗತ್ಯತೆಯ ಬಗ್ಗೆ ನಾಯಕರಿಗೆ ಸಲಹೆ ನೀಡಿದ್ದಾರೆ. ನಗರದಲ್ಲಿನ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಅನೇಕರು ಖಾರವಾಗಿಯೇ ಅಸಮಾಧಾನ ವ್ಯಕ್ತಪಡಿಸುವುದರ ಜತೆಗೆ ಪರೋಕ್ಷವಾಗಿ ಲೋಪದೋಷಗಳನ್ನು ಎತ್ತಿ ತೋರಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಗೆಲುವಿನ ಅತಿಯಾದ ಆತ್ಮವಿಶ್ವಾಸವು ಸೋಮಾರಿತನಕ್ಕೆ ಕಾರಣವಾಯಿತು. ಜನರಿಗೆ ಸಮರ್ಪಕವಾಗಿ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸುವಲ್ಲಿ ನಿರ್ಲಕ್ಷ್ಯ ತೋರಲಾಯಿತು. ಪ್ರಚಾರದ ಸಂದರ್ಭದಲ್ಲಿ ಸ್ಥಳೀಯರ ಅಭಿಪ್ರಾಯವನ್ನು ಪಡೆಯದೇ ಅನ್ಯ ಪಕ್ಷದವರನ್ನು ಸೇರ್ಪಡೆ ಮಾಡಿಕೊಂಡಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಒಗ್ಗಟ್ಟಿನ ಸಂದೇಶದಲ್ಲಿ ಯಾರು ಸಹ ಮನೆ ಮನೆಗೂ ಹೋಗಿ ನಿಷ್ಠೆಯಿಂದ ಪ್ರಚಾರ ಕೈಗೊಳ್ಳಲಿಲ್ಲ. ಮೂಲ ಮತ್ತು ವಲಸಿಗರ ವೈಮನಸ್ಯದಲ್ಲಿ ಸಮರ್ಪಕವಾಗಿ ಕೆಲಸ ಮಾಡಲಿಲ್ಲ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಅಳಲು ತೋಡಿಕೊಂಡರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶ ಏರುಪೇರಿಗೆ ಈ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ, ಕಾಂಗ್ರೆಸ್‌ನ ಗ್ಯಾರೆಂಟಿ ಭರವಸೆಗಳು, ಬಿಜೆಪಿಗೆ ಮಿತಿ ಮೀರಿ ಅನ್ಯರ ಸೇರ್ಪಡೆಯು ಸೇರಿದಂತೆ ಮೂರು ಅಂಶಗಳು ಕಾರಣವಾಗಿವೆ ಎಂದು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ವಿಶ್ಲೇಷಿಸಿದರು.
* ಹಿತಶತ್ರುಗಳನ್ನು ದೂರವಿಡಿ ಪಕ್ಷದಲ್ಲಿಯೇ ಇದ್ದು ದ್ರೋಹವೆಸಗುವವರನ್ನು ದೂರವಿರಿಸಲು, ಸಾಮಾನ್ಯ ಜನರ ಭೇಟಿಗೆ ಅಡ್ಡಿಯಾಗಿ ಸುತ್ತಲು ಕೋಟೆಯಂತೆ ಮುತ್ತಿಕೊಳ್ಳುವವರನ್ನು ಭೇದಿಸಿ, ಬಡ ಮತ್ತು ಮಧ್ಯಮ ವರ್ಗದವರೊಂದಿಗೆ ಒಡನಾಟವಿಟ್ಟುಕೊಳ್ಳಲು ನಾಯಕರು ಮಾಜಿ ಸಚಿವರಿಗೆ ಸಲಹೆ ನೀಡಿದರು. ಕ್ಷೇತ್ರಕ್ಕೆ ಬಂದಾಗಲೆಲ್ಲ ನಾಯಕರೇ ಮುತ್ತಿಕೊಳ್ಳುತ್ತಿದ್ದರು. ಜನರ ಭೇಟಿಗೆ ಕೋಟೆಯಂತೆ ಅಡ್ಡ ಬರುತ್ತಿದ್ದರು. ಇದರಿಂದ ವ್ಯಾಪಕವಾಗಿ ಅಸಮಾಧಾನ ವ್ಯಕ್ತವಾಗುತ್ತಿದೆ. ಲೋಪದೋಷಗಳ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.
ಡಾ ಕೆ.ಸುಧಾಕರ್, ಮಾಜಿ ಸಚಿವರು,