

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿದ್ದು, ಅಡೆತಡೆ ಇಲ್ಲದೆ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಡಿಸಿಎಫ್ ಡಾ.ಕರಿಕಾಳನ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮನ್ಯು ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ 2.15 ಗಂಟೆಯಲ್ಲಿ ಅಂಬಾರಿ ತಲುಪಿಸಿದ್ದಾನೆ ಎಂದರು.
ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಲಕ್ಷಾಂತರ ಜನರು ಸೇರಿದ್ದರು. ಶಬ್ದ ಹೆಚ್ಚಾಗಿದ್ದರೂ ಮೆರವಣಿಗೆಯಲ್ಲಿ ಭಾಗಿಯಾಗಿದ್ದ 9 ಆನೆಗಳು ಯಾವುದೇ ಸಮಸ್ಯೆ ಇಲ್ಲದ ರೀತಿ ಪೂರ್ಣಗೊಳಿಸಿದವು. ಕಾವಾಡಿಗಳು ಮತ್ತು ಮಾವುತರು 59 ದಿನಗಳ ಕಾಲ ಮಾಡಿದ ಪ್ರಯತ್ನದ ಫಲವಾಗಿ ಇದು ಸಾಧ್ಯವಾಯಿತು. ಇದಕ್ಕಾಗಿ ನಾವು ಪ್ರತಿದಿನ ಸಂಜೆ ತಾಲೀಮು ನಡೆಸುತ್ತಿದ್ದೆವು ಎಂದರು.
ದಸರಾ ಆನೆಗಳಿಗೆ ಬೇರೆ ಬೇರೆ ರೀತಿ ತರಬೇತಿ ನೀಡಿದ್ದರೂ ಜನಸಂಖ್ಯೆ ಹೆಚ್ಚಾಗಿದ್ದಾಗ ಆನೆಗಳು ಹೇಗೆ ಸಾಗುತ್ತವೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಬುಧವಾರದ ಮೆರವಣಿಗೆ ಪೂರ್ಣಗೊಂಡ ಮೇಲೆ ನಮ್ಮ ಚಿಂತೆ ದೂರವಾಯಿತು. ನಾಡಹಬ್ಬವನ್ನು ಯಶಸ್ವಿ ಮಾಡಬೇಕೆಂದು ನಾವು ಪ್ರಯತ್ನ ಮಾಡಿದ್ದೆವು. ಜತೆಗೆ, ತಾಯಿ ಚಾಮುಂಡೇಶ್ವರಿ ಕೂಡ ದಸರಾ ಮೆರವಣಿಗೆಯನ್ನು ಯಶಸ್ವಿಗೊಳಿಸಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ ಎಂದು ಹೇಳಿದರು.
ಲಕ್ಷ್ಮೀ ಆನೆ ಮತ್ತು ಮರಿ ಆನೆ ಚೆನ್ನಾಗಿವೆ. ಶುಕ್ರವಾರ ಲಕ್ಷ್ಮೀ ಆನೆಯನ್ನು ಕ್ಯಾಂಪ್‌ಗೆ ಕಳುಹಿಸಲಾಗುತ್ತದೆ. ಮರಿ ಆನೆಯ ಓಡಾಟ ಹೆಚ್ಚಾಗಿದೆ. ಯಾರೇ ಮುಂದೆ ಬಂದರೂ ಹೊಡೆಯಲು ಬರುತ್ತಿದೆ. ಸುಮ್ಮನೆ ಓಡುತ್ತಲೇ ಇರುತ್ತದೆ. ಆನೆ ವೈದ್ಯರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮಹೇಂದ್ರ, ಭೀಮ ಭವಿಷ್ಯದ ಆನೆಗಳು:
ಮಹೇಂದ್ರ ಮತ್ತು ಭೀಮ ಭವಿಷ್ಯದ ಆನೆಗಳಾಗಿವೆ. ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಎಲ್ಲ ಲಕ್ಷಣಗಳು ಈ ಆನೆಗಳಿಗೆ ಇದೆ. ಅರ್ಜುನ ಮತ್ತು ಅಭಿಮನ್ಯು ರೀತಿ ಮುಂದಿನ ದಸರಾದಲ್ಲಿ ಮಹೇಂದ್ರ ಮತ್ತು ಭೀಮನ ಬಗ್ಗೆ ಜನ ಮಾತನಾಡಲಿದ್ದಾರೆ ಎಂದು ಕರಿಕಾಳನ್ ಅಭಿಪ್ರಾಯಪಟ್ಟರು.
ಇನ್ನು ಪಾರ್ಥಸಾರಥಿ, ಸುಗ್ರೀವ, ಶ್ರೀರಾಮ ತಾಲೀಮಿನಲ್ಲಿ ತೊಂದರೆ ನೀಡಿಲ್ಲ. ಮೊದಲ ದಸರೆಯಾದ ಕಾರಣ ಮೆರವಣಿಗೆಗೆ ಕರೆತಂದಿರಲಿಲ್ಲ ಎಂದರು.