ಮುತಾಲಿಕ ಗಡಿಪಾರಿಗೆ ಆಗ್ರಹ

gadipaaru
Published on

ಹುಬ್ಬಳ್ಳಿ: ಪ್ರಚೋದನಕಾರಿ ಹೇಳಿಕೆ ನೀಡಿರುವ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರನ್ನು ತಕ್ಷಣ ಬಂಧಿಸಿ ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಮುಸ್ಲಿಂ ಸಮಾಜದ ಯುವಕರು ಹಾಗೂ ದಲಿತ ಸಂಘಟನೆಗಳು ಒತ್ತಾಯಿಸಿವೆ.

ಮಸೀದಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತೇವೆ ಹಾಗೂ ಮುಸ್ಲಿಂರು ನೀಚರು ಎಂಬ ಪದ ಬಳಕೆ ಮಾಡುವ ಮೂಲಕ ಮುತಾಲಿಕ್, ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ. ನಾವೆಲ್ಲರೂ ಭಾವೈಕ್ಯತೆಯಿಂದ ಜೀವನ ನಡೆಸಿಕೊಂಡು ಬರುತ್ತಿದ್ದೇವೆ. ಸಮಾಜದ ನೆಮ್ಮದಿ ಕೆಡಿಸುವ ಹೇಳಿಕೆ ನೀಡಿರುವ ಮುತಾಲಿಕ್​ರನ್ನು ಗಡಿಪಾರು ಮಾಡಬೇಕು ಎಂದು ಅಶ್ಪಾಕ್ ಕುಮಟಾಕರ, ಶಯಾಕತ್ ಅಲಿ ಬಡಿಗೇರ, ಫತೇಶ ಯರಗಟ್ಟಿ, ಅಬ್ದುಲ್ಲಾ ಬೇಪಾರಿ, ಹು-ಧಾ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ದೇಶದ ಕಾನೂನನ್ನು ಗೌರವಿಸದೇ ಮನಬಂದಂತೆ ನಾಲಿಗೆ ಹರಿಬಿಡುವ ಪ್ರಮೋದ ಮುತಾಲಿಕ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂಟ ಟಿಕೆಟ್ ಗಿಟ್ಟಿಸುವ ಪ್ರಯತ್ನ ನಡೆಸಿದ್ದಾರೆ. ಈದ್ಗಾ ಮೈದಾನದ ಗಣೇಶೋತ್ಸವ ಕುರಿತು ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net