

ಶಿವಮೊಗ್ಗ: ಜಿಲ್ಲಾದ್ಯಂತ 1,300 ರೌಡಿ ಶೀಟರ್‌ಗಳಿದ್ದು ಈಗಾಗಲೇ 80ರಿಂದ 100 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 8 ರೌಡಿಶೀಟರ್‌ಗಳು ಸೇರಿ ಇದುವರೆಗೆ 53 ರೌಡಿಶೀಟರ್ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ಈಗಾಗಲೇ ಡಿಜೆ ಮತ್ತು ಬೈಕ್ rallyಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಪ್ರತಿಯೊಂದು ಸಮಿತಿಯವರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮಿಥುನ್‌ಕುಮಾರ್ ಹೇಳಿದರು. ಸೆ.6ರಿಂದಲೇ ಶಿವಮೊಗ್ಗಕ್ಕೆ ಆರ್‌ಎಎಫ್ನ ಒಂದು ತುಕಡಿ ಬರಲಿದೆ. 15 ಕೆಎಸ್‌ಆರ್‌ಪಿ ತುಕಡಿ, 8 ಡಿಎಆರ್ ತುಕಡಿ ಇರಲಿವೆ. ಒಂದು ಸಾವಿರ ಹೋಮ್ಗಾರ್ಡ್ಸ್‌ಗಳು, ಬೇರೆ ಜಿಲ್ಲೆಗಳಿಂದ 1,500 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆ ಅಡ್ಡಿಪಡಿಸುವುದಿಲ್ಲ. ಆದರೆ ಪ್ರಚೋಧನಕಾರಿ ಹೇಳಿಕೆ ಅಥವಾ ಪೋಸ್ಟ್‌ಗಳಿರುವ ಬ್ಯಾನರ್, ಫ್ಲೆಕ್ಸ್ ಅಥವಾ ಬಂಟಿಂಗ್ಸ್‌ಗಳನ್ನು ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಪ್ರಿಂಟಿಂಗ್ ಪ್ರೆಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಸ್ಪಿ ಎಚ್ಚರಿಕೆ ನೀಡಿದರು. ಪ್ರಿಂಟ್ ಮಾಡುವವರ ಹೆಸರು ಮತ್ತು ಫೋನ್ ನಂಬರ್ ಅನ್ನು ಕಡ್ಡಾಯವಾಗಿ ಬ್ಯಾನರ್‌ಗಳಲ್ಲಿ ಹಾಕಬೇಕು. ಅವಹೇಳನಕಾರಿ ಬರಹಗಳಿದ್ದರೆ ಪೊಲೀಸರ ಗಮನಕ್ಕೆ ತರುವಂತೆ ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದರು.
ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಭದ್ರಾವತಿ, ಶಿವಮೊಗ್ಗ ಮತ್ತು ಸಾಗರದಲ್ಲಿ ಕಳೆದ ಬಾರಿಯಂತೆ ಸ್ವಯಂಸೇವಕರನ್ನು ನಿಯೋಜಿಸಲಾಗುವುದು.- ಜಿ.ಕೆ.ಮಿಥುನ್‌ಕುಮಾರ್, ಎಸ್ಪಿ