ಮಹಿಳಾ ಉದ್ಯಮಿಗಳ ಕೌಶಲ ಪ್ರದರ್ಶನ, ಹುಬ್ಬಳ್ಳಿಯಲ್ಲಿ ಆಯೋಜನೆ

IMG-20240822-WA0006_1-1.jpg
Published on

ಹುಬ್ಬಳ್ಳಿ: ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಹಾಗೂ ಅಮರ 5.0 ದೇಶಿ ಕೌಶಲ ವತಿಯಿಂದ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಮುಂಬರುವ ಹಬ್ಬಗಳ ಋತುವಿನಲ್ಲಿ ಶಾಪಿಂಗ್ ಅನುಭವ ಸೃಷ್ಟಿಸಲು ನಗರದಲ್ಲಿ ಅತಿದೊಡ್ಡ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಕ್ಲಬ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೋಟೆಲ್ ನಲ್ಲಿ ಆ. 24 ಹಾಗೂ 25ರಂದು ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ಪ್ರದರ್ಶನ ನಡೆಯಲಿದೆ.

ಲಘು ಉದ್ಯೋಗ ಭಾರತಿ ವತಿಯಿಂದ 24ರಂದು ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮಹಿಳಾ ಉದ್ಯಮಶೀಲತೆ, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಕಳೆದ 36 ವರ್ಷಗಳಿಂದ ಕ್ಲಬ್ ನಿಂದ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಮಾಡಲಾಗಿದೆ. ಪ್ರತಿ ವರ್ಷ ಚಾರಿಟಿ ಕಾರ್ಯಕ್ರಮಗಳ ಮೂಲಕ ಹಣ ಸಂಗ್ರಹಿಸಿ ಹಿಂದುಳಿದ ಮಹಿಳೆಯರ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಆ ಹಣ ವಿನಿಯೋಗಿಸಲಾಗುತ್ತಿದೆ. ಇದೇ ರೀತಿ ಅಮರ ದೇಶಿ ಕೌಶಲ ಎಂಬ ಮೊದಲ ಪ್ರದರ್ಶನದೊಂದಿಗೆ ಉತ್ತರ ಕರ್ನಾಟಕದ ಮಹಿಳಾ ಉದ್ಯಮಿಗಳನ್ನು ಪೋಷಿಸಲು ಮತ್ತು ಉತ್ತೇಜಿಸಲು ಕ್ಲಬ್ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದರು.

ಇವೆಂಟ್ ಕೋ-ಚೇರ್ಮನ್ ಶಶಿಮಂಗಳ ಐತಾಳ ಮಾತನಾಡಿ, ಕ್ಲಬ್‌ನ ಮಹಿಳಾ ವಿಭಾಗವು ಆಯೋಜಿಸಿರುವ ಈ ಪ್ರದರ್ಶನದಲ್ಲಿ ಕರ್ನಾಟಕದ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಿಂದ ಅಷ್ಟೇ ಅಲ್ಲ ಮುಂಬೈ, ಹೈದರಾಬಾದ್, ಪುಣೆ, ಕೊಲ್ಲಾಪುರ ಮುಂತಾದ ಕಡೆಗಳಿಂದ ಮಹಿಳಾ ಉದ್ಯಮಿಗಳು ಭಾಗವಹಿಸುವರು. ಮಹಿಳೆಯರು ತಮ್ಮ ಕೌಶಲ, ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅನುಕೂಲವಾಗಲಿದೆ ಎಂದರು.

50ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಕಾರ್ಯಾಗಾರ ಮತ್ತು ನೆಟ್ವರ್ಕಿಂಗ್ ಸೆಷನ್ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಉದ್ಯಮ, ವ್ಯಾಪಾರ ಬೆಳೆಸುವುದು ಹಾಗೂ ಪರಸ್ಪರ ಸಬಲೀಕರಣಕ್ಕೆ ಒತ್ತು ನೀಡಲಿದ್ದಾರೆ.

ಕೌಶಲ ಪ್ರದರ್ಶನವು ಸ್ಥಳಿಯ ಬ್ರ್ಯಾಂಡ್ ಗಳನ್ನು ಅನ್ವೇಷಿಸಲು ಮತ್ತು ಉತ್ತರ ಕರ್ನಾಟಕದ ಮಹಿಳೆಯರಿಗೆ ಬೆಂಬಲ ನೀಡಲು ಉತ್ತಮ ವೇದಿಕೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಕೋರಿದರು.

ಇವೆಂಟ್ ಚೇರ್ಮನ್ ರಂಜನಾ ಖರಿತ್, ಕ್ಲಬ್ ಕಾರ್ಯದರ್ಶಿ ಶೈಲಜಾ ಬಗಾಡೆ, ದೀಪಾಲಿ ಮುಧೋಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net