ರಾಜಾ ಲಖಮಗೌಡ ಪಿಯು ಕಾಲೇಜಿನಲ್ಲಿ ವಿಜ್ಞಾನ ಪ್ರದರ್ಶನ

8dvk 3
Published on

ಬೆಳಗಾವಿ: ವಿದ್ಯಾರ್ಥಿ ಜೀವನದಲ್ಲಿ ಕುತೂಹಲ, ಧೈರ್ಯ ಮತ್ತು ಸೃಜನಶೀಲತೆಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ಭವಿಷ್ಯದಲ್ಲಿ ಸಾಧಕರಾಗಿ ಬೆಳೆಯಬಹುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ‘ಸೈನ್ಸಿಯಾ ವೆನಾರಿ-6.0’ ಎಂಬ ಶೀರ್ಷಿಕೆಯ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರತಿಭಾನ್ವೇಷಣೆ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಶ್ರೇಷ್ಠ ಮನಸ್ಥಿತಿ, ಮಧ್ಯಮ ಮನಸ್ಥಿತಿ ಮತ್ತು ಸಣ್ಣ ಮನಸ್ಥಿತಿಯವರಿರುತ್ತಾರೆ. ಆದರೆ ವಿದ್ಯಾರ್ಥಿಗಳು ಶ್ರೇಷ್ಠ ಮನಸ್ಥಿತಿ ಹೊಂದಿ, ಸಾಧನೆ ಮಾಡಿ, ಸಾಧಕರಾಗಬೇಕು. ಜೀವನದಲ್ಲಿ ಋಣಾತ್ಮಕತೆಗಿಂತ ಧನಾತ್ಮಕತೆಗೆ ವಿಶೇಷ ಗಮನ ಕೊಡಬೇಕು. ಛಲ, ಗುರಿ ಮತ್ತು ಉದ್ದೇಶಗಳು ಭವಿಷ್ಯಕ್ಕೆ ಆಧಾರವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳ ಬಗ್ಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಿಂಗೌಡ ವಿ. ದೇಸಾಯಿ ಮಾತನಾಡಿ, ವೈಜ್ಞಾನಿಕ ಸಂಶೋಧನೆಗಳು ಜನತೆಯ ಅಭಿವೃದ್ಧಿಗೆ ಬಳಕೆಯಾಗಬೇಕು. ಸಾವಯವ ಕೃಷಿ ಮೂಲಕ ಆಹಾರ ಬೆಳೆಗಳನ್ನು ಬೆಳೆದು ನಾಗರಿಕರ ಆರೋಗ್ಯ ಕಾಪಾಡುವ ಆವಿಷ್ಕಾರಕ್ಕೆ ಒತ್ತು ನೀಡಬೇಕು. ಇಂದು ಸಂಶೋಧನೆ ಮಾಡಲು ವಿವಿಧ ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರಾಜಾ ಲಖಮಗೌಡ ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೆ.ಎಸ್.ಕವಳೇಕರ, ಉಪ ಪ್ರಾಚಾರ್ಯ ಡಾ.ಎಸ್.ಎ.ಜವಳಿ ಇತರರಿದ್ದರು.

ಪಿಯು ಪ್ರಾಚಾರ್ಯ ವಿ.ಸಿ.ಕಾಮಗೋಳ ಸ್ವಾಗತಿಸಿದರು. ಮಂಜರಿ ಕಾರೇಕರ ಸ್ವಾಗತಗೀತೆ ಹಾಡಿದರು. ಎನ್.ಆರ್.ಚಮಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net