ವಿದ್ಯಾರ್ಥಿಗಳು ಗಾಂಧೀಜಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ

27 Dwd 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಾಂಧೀಜಿ ಅವರು ಭಾರತದ ಸ್ವಾತಂತ್ರ‍್ಯಕ್ಕಾಗಿ ನಡೆಸಿದ ಹೋರಾಟ ನಮ್ಮೆಲ್ಲರಿಗೆ ಸೂರ್ತಿಯಾಗಬೇಕು. ಅವರ ಸತ್ಯ, ಅಹಿಂಸಾ ಸಿದ್ಧಾಂತಗಳನ್ನು ಪ್ರಪಂಚ ಅರಿತು ಅ. 2ನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಅವರ ಮೌಲ್ಯ ಮತ್ತು ತತ್ವಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಎಸ್‌ಎಂಐ ಕಾಲೇಜಿನ ಉಪ ಪ್ರಾಚಾರ್ಯ ಡಾ. ಸೂರಜ್ ಜೈನ್ ಹೇಳಿದರು.
ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಧಾರವಾಡದ ಪ್ರಾದೇಶಿಕ ಪತ್ರಾಗಾರ ಇಲಾಖೆಯ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಗಳು ಮತ್ತು ದಾಖಲೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಯಲಿಗಾರ ಮಾತನಾಡಿ, ಇತಿಹಾಸ ತಿಳಿದುಕೊಳ್ಳಲು ದಾಖಲೆಗಳ ಮಹತ್ವ ಅರಿಯುವುದು ಅಗತ್ಯ. ಐತಿಹಾಸಿಕ ದಾಖಲೆಗಳು ಕಂಡಲ್ಲಿ ಸಂರಕ್ಷಿಸಲು ಇಲಾಖೆಗೆ ನೀಡಬೇಕು ಎಂದರು.
ಗೋವಾದ ಇಂಡೋ ಪೊರ್ಚುಗೀಸ್ ಸಾಹಿತ್ಯ ವೇದಿಕೆಯ ನಿರ್ದೇಶಕ ಡಾ. ಅರವಿಂದ ಯಾಳಗಿ ಮಾತನಾಡಿ, ಲಂಡನ್, ಮಾಸ್ಕೋ, ಪ್ಯಾರಿಸ್, ಜೋಹಾನ್ಸ್ಬರ್ಗ್, ಇತರ ದೇಶಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಉಲ್ಲಾಳದ ಅಬ್ಬಕ್ಕ, ರಾಣಿ ಚೆನ್ನಭೈರಾದೇವಿ, ಕೆಳದಿ ಚೆನ್ನಮ್ಮ ಮುಂತಾದ ಕರ್ನಾಟಕದ ರಾಣಿಯರ ದಾಖಲೆಗಳನ್ನು ಕಾಣಬಹುದು ಎಂದರು.
ಡಾ. ಕೆ.ಎಚ್. ನಾಗಚಂದ್ರ, ಮಹಾವೀರ ಉಪಾಧ್ಯೆ, ಡಾ. ಆರ್.ವಿ. ಚಿಟಗುಪ್ಪಿ ಉಪಸ್ಥಿತರಿದ್ದರು. ಸಿಂಚನಾ ಭಟ್ ಪ್ರಾರ್ಥಿಸಿದರು. ಪ್ರೊ. ಮಹಾಂತ ಎಂ. ದೇಸಾಯಿ ನಿರೂಪಿಸಿದರು, ಪ್ರೊ. ಚೇತನಾ ಕೋರಿಶೆಟ್ಟರ ಸ್ವಾಗತಿಸಿದರು, ಪ್ರೊ. ವಾಣಿಶ್ರೀ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net