

ಮೈಸೂರು: ‘ಕನ್ನಡದ ಕಾವಲಿನಿಂದ, ಕರುನಾಡ ಗದ್ದುಗೆಯವರೆಗೆ’ ಕಳೆದ ನಾಲ್ಕು ದಶಕಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದು ಬಂದ ರಾಜಕೀಯದ ಹಾದಿಯನ್ನು ದೃಶ್ಯದೊಂದಿಗೆ ಅಕ್ಷರ ರೂಪ ನೀಡಿ ಅನಾವರಣಗೊಳಿಸಲಾಗಿದೆ.
ದಸರಾ ಪ್ರಯುಕ್ತ ವಸ್ತುಪ್ರದರ್ಶನ ಆವರಣದಲ್ಲಿ ಅನಾವರಣಗೊಂಡಿರುವ ‘ಸಿದ್ಧಿ ಸಾಧಕ ಸಿದ್ದರಾಮಯ್ಯ’ ಅವರ ಅಪರೂಪದ ಛಾಯಾಚಿತ್ರಗಳ ಸಂಗ್ರಹ ಲೋಕ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.
ಹಿರಿಯ ಪತ್ರಕರ್ತ ಟಿ.ಗುರುರಾಜ್ ಅವರು ನಾಲ್ಕು ದಶಕಗಳ ಸಿಎಂ ಸಿದ್ದರಾಮಯ್ಯ ಅವರ ಅಪರೂಪದ 230 ಛಾಯಾಚಿತ್ರಗಳನ್ನು ಸಂಗ್ರಹಿಸಿ ಅವುಗಳಿಗೆ ಶೀರ್ಷಿಕೆ ನೀಡಿದ್ದಾರೆ.
1983ರಿಂದ ಇದುವರೆಗೂ ಸಿದ್ದರಾಮಯ್ಯ ಅವರು ನಡೆದು ಬಂದ ಹಾದಿಯ ಲೋಕವೇ ತೆರೆದಿದೆ. ಸ್ವತಃ ಸಿದ್ದರಾಮಯ್ಯ ಅವರೇ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ತಾವು ನಡೆದು ಬಂದ ಹಾದಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು. ಪ್ರತಿಯೊಂದು ಫೋಟೋ ಕುತುಹೂಲದಿಂದ ವೀಕ್ಷಿಸುವ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಕನ್ನಡ ಕಾವಲು ಸಮಿತಿ ಹೋರಾಟದಿಂದ ಆರಂಭಗೊಂಡ ರಾಜಕೀಯ ಜೀವನ, ಕನ್ನಡವೇ ನನ್ನ ಕುಲ, ನನ್ನೂಟ ನನ್ನಿಷ್ಟ, ಸಿನಿಮಾ ತಾರೆಯೊಂದಿಗಿನ ಒಡನಾಟ, ರಾಜಕೀಯ ನಾಯಕರೊಂದಿಗೆ ನಂಟು, ಕುಟುಂಬದವರೊಂದಿಗೆ ಆಪ್ತ ಚಿತ್ರಗಳು ಹೀಗೆ 40 ವರ್ಷಗಳಲ್ಲಿ ನಡೆದ ಜೀವನವನ್ನು ಕಣ್ತುಂಬಿಕೊಂಡರು.
ಸಂಗೀತ ಕಾರಂಜಿ ವೀಕ್ಷಣೆ
ವಸ್ತುಪ್ರದರ್ಶನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿಯನ್ನು ವೀಕ್ಷಣೆ ಮಾಡಿದರಲ್ಲದೇ ಅಂಗಳದಲ್ಲಿನ ಮಳಿಗೆಗಳಿಗೆ ಭೇಟಿ ನೀಡಿದರು. ಅಲ್ಲದೆ ಅಲ್ಲಿಯೇ ಉಪಾಹಾರ ಸೇವನೆ ಮಾಡಿ ಬಳಿಕ ತೆರಳಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮೇಯರ್‌ಗಳಾದ ಶ್ರೀಕಂಠಯ್ಯ, ಬಿ.ಎಲ್.ಭೈರಪ್ಪ , ಪತ್ರಕರ್ತ ಟಿ.ಗುರುರಾಜ್, ಸಿಇಒ ರುದ್ರೇಶ್ ಇತರರು ಇದ್ದರು.