ಪುರಾತತ್ವ ಇಲಾಖೆಯಲ್ಲಿ ಛಾಯಾಚಿತ್ರಗಳ ಪ್ರದರ್ಶನ

heritage Exhibition
Published on

ಮೈಸೂರು; ರಾಜ್ಯದಲ್ಲಿ ಕಂಡುಬರುವ ಶಿಲಾಗೋರಿಗಳು, ಸಂಗೀತ ಕಲ್ಲುಗಳು, ವೃತ್ತ ಶಿಲಾ ಸಮಾಧಿಗಳು, ಕಲ್ಲಾಸರೆ ಚಿತ್ರಗಳನ್ನು ನೋಡಬೇಕೇ? ಹಾಗಾದರೆ, ನಗರದಲ್ಲಿರುವ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಕಚೇರಿಗೆ ಒಮ್ಮೆ ಭೇಟಿ ನೀಡಬೇಕು.


ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಈ ಇಲಾಖೆಯಲ್ಲಿ ಏರ್ಪಡಿಸಿರುವ ಕರ್ನಾಟಕದ ಪ್ರಾಗೈತಿಹಾಸಿಕ ಕಾಲದ ಸುಂದರ ಛಾಯಾಚಿತ್ರಗಳ ಪ್ರದರ್ಶನದಲ್ಲಿ ಅಪರೂಪ ಫೋಟೋಗಳು ವೀಕ್ಷಣೆಗೆ ದೊರೆಯಲಿವೆ. ಹಳೇ ಶಿಲಾಯುಗ, ನವಶಿಲಾಯುಗ, ಬೃಹತ್ ಶಿಲೆಗಳ ಅವಶೇಷಗಳ ಫೋಟೋಗಳು ಇಲ್ಲಿವೆ.


ಬಳ್ಳಾರಿ ಬಳಿಯ ಸಂಗನಕಲ್ಲು, ಕಪಗಲ್ಲು ಬೆಟ್ಟಗಳು, ಕಲ್ಲುಕುಟ್ಟು ಚಿತ್ರಗಳು, ಬಾಗಲಕೋಟೆಯ ಐಹೊಳೆಯ ಶಿಲಾಗೋರಿಗಳು, ಬೆನಕನವಾರಿ ಗ್ರಾಮದ ಕಲ್ಲಾಸರೆಯ ಚಿತ್ರಗಳು, ಉಡುಪಿ ಜಿಲ್ಲೆಯ ಪಳ್ಳಿ ಗ್ರಾಮದಲ್ಲಿ ಕಾಣಸಿಗುವ 3,500 ವರ್ಷದಷ್ಟು ಪ್ರಾಚೀನವಾದ ಶಿಲಾಗೋರಿ ಚಿತ್ರಗಳು, ಶಿಲಾಸಮಾಧಿಗಳ ಚಿತ್ರಗಳು ಗಮನ ಸೆಳೆಯುತ್ತವೆ.


ಬಳ್ಳಾರಿಯ ಕುಡತಿನಿಯಲ್ಲಿರುವ ಕ್ರಿ.ಪೂ.3000-1500 ಕಾಲದ ಬೂದಿಗುಡ್ಡಗಳಲ್ಲಿರುವ ಮರ, ಸಗಣಿಯ ಕುರುಹುಗಳು, ಚಿಕ್ಕಬಳ್ಳಾಪುರದ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಕಂಡು ಬರುವ ಹೂವಿನಾಕಾರದ ಶಿಲಾಗೋರಿ, ತೀವ್ರ ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಮಾನವರು, ಪ್ರಾಣಿಗಳು ರಕ್ಷಣೆಗೆ ಬಳಸುವ ಕಲ್ಲಾಸರೆಗಳು, ಪಾತಕೋಟೆಯಲ್ಲಿ ಕಾಣಸಿಗುವ ಕಲ್ಗುಳಿಗಳು, ಶಿಲಾಯುಧಗಳ ಚಿತ್ರಗಳು ಇಲ್ಲಿ ವೀಕ್ಷಣೆ ದೊರೆಯಲಿವೆ.


ರಾಮನಗರ ಜಿಲ್ಲೆಯ ಹಕ್ಕಿನಾಳು ಗ್ರಾಮದಲ್ಲಿರುವ ಶಿಲಾಗೋರಿಗಳು, ತುಮಕೂರು ಜಿಲ್ಲೆಯ ಪಾವಗಡದಲ್ಲಿ ಕಂಡುಬರುವ ಎರಡು ನಿಲುಸುಗಲ್ಲಗಳು, ಬಂಡೆಗಳ ಮೇಲೆ ರಚನೆ ಮಾಡಿರುವ ಕುಟ್ಟು ಚಿತ್ರಗಳು, ಸಂಗೀತ ಹೊಮ್ಮಿಸುವ 8 ಅಡ್ಡಿ ಉದ್ದ ಇರುವ ಕಲ್ಲು, ಇದೇ ಜಿಲ್ಲೆಯ ಹುತ್ರಿದುರ್ಗದಲ್ಲಿರುವ ಶಿಲಾವೃತ್ತ ಸಮಾಧಿಗಳು, ಬಾಗಲಕೋಟೆ ಜಿಲ್ಲೆಯ ಕುಟ್ಟಣಕೆರೆಯಲ್ಲಿ ಕಂಡುಬರುವ ಕಲ್ಲಾಸರೆಯ ಮೇಲೆ ನೈಸರ್ಗಿಕ ಬಣ್ಣಗಳಿಂದ ರಚಿಸಲಾಗಿರುವ ಚಿತ್ರಗಳು ಪುರಾತನ ಇತಿಹಾಸವನ್ನು ಪರಿಚಯಿಸುತ್ತವೆ.


ಚಾಲನೆ: ಪ್ರದರ್ಶನಕ್ಕೆ ಶನಿವಾರ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮಾ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಎ.ದೇವರಾಜು, ಉಪನಿರ್ದೇಶಕಿ ಡಾ.ಸಿ.ಎನ್.ಮಂಜುಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net