

ಧಾರವಾಡ: ನಗರದ ಸಾಧನಕೇರಿಯ ಆದರ್ಶ ವಿದ್ಯಾಲಯದಲ್ಲಿ ದೇಶದ ವಿವಿಧ ರಾಜ ಮನೆತನಗಳ ಹಾಗೂ ವಿದೇಶಗಳ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನವನ್ನು ಬುಧವಾರ ಆಯೋಜಿಸಲಾಗಿತ್ತು.
ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರು, ಗಂಗರು, ಚೋಳ ಸಾಮ್ರಾಜ್ಯ, ಈಸ್ಟ್ ಇಂಡಿಯಾ ಕಂಪನಿ ಸೇರಿ ೨೫ ಹೊರ ದೇಶಗಳ ನಾಣ್ಯ- ನೋಟುಗಳು ಪ್ರದರ್ಶನಕ್ಕಿದ್ದವು.
ರಷ್ಯಾ, ಅಮೆರಿಕ, ಬ್ರಿಟನ್, ಶ್ರೀಲಂಕಾ, ನೆದರ್‌ಲ್ಯಾಂಡ್, ನೇಪಾಳ, ಕುವೈತ್, ಅರಬ್ ಸೇರಿ ೨೫ ದೇಶಗಳ ೩೦೦ಕ್ಕೂ ಹೆಚ್ಚು ನಾಣ್ಯ- ನೋಟುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ತಿಳಿಸುವ ಉದ್ದೇಶದಿಂದ ಕಲಘಟಗಿ ಪಟ್ಟಣದ ಸುನೀಲಕುಮಾರ ಕಮ್ಮಾರ ಪ್ರದರ್ಶನ ಆಯೋಜಿಸಿದ್ದರು.
ಪಂಕ್ಚರ್ ಶಾಪ್ ನಡೆಸುವ ಸುನೀಲ ೧೫ನೇ ವರ್ಷದವರಿದ್ದಾಗ ನಾಣ್ಯಗಳ ಸಂಗ್ರಹ ಹವ್ಯಾಸ ಬೆಳೆಸಿಕೊಂಡವರು. ೮ ವರ್ಷಗಳಿಂದ ನಾಣ್ಯ ಪ್ರದರ್ಶನ ನಡೆಸುತ್ತಿದ್ದಾರೆ. ಕನ್ನಡ ನಾಡಿಗೆ `ಕರ್ನಾಟಕ' ಹೆಸರು ನಾಮಕರಣಗೊಂಡು ೫೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಆಯ್ದ ೫೦ ತಾಲೂಕುಗಳಲ್ಲಿ ಪ್ರದರ್ಶನ ಹಮ್ಮಿಕೊಂಡಿದ್ದಾರೆ.
ಮುಖ್ಯಾಧ್ಯಾಪಕ ಸುರೇಶ ಸನದಿ, ಶಿಕ್ಷಕರಾದ ಅಶೋಕ ಡೊಂಬರಕೊಪ್ಪ, ಗೀತಾ ಚೆನ್ನಗೌಡ್ರ, ಜಿ.ಜಿ. ಹಿರೇಮಠ, ಇತರರಿದ್ದರು.