

ಮೈಸೂರು: ಮಹಿಳೆ ಆರ್ಥಿಕವಾಗಿ ಸಬಲಳಾದರೆ ಸದೃಢ ಸಮಾಜ ಹಾಗೂ ಸದೃಢ ದೇಶ ನಿರ್ಮಾಣ ಸಾಧ್ಯ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿ.ಎನ್. ನಂದಿನಿ ಅಭಿಪ್ರಾಯಪಟ್ಟರು.
ಮಹಿಳಾ ಸಮನ್ವಯ ಸಂಸ್ಥೆಯು ನಗರದ ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಿಶು ವಿಹಾರ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಉದ್ಯಮಿಗಳು ಉತ್ಪಾದಿಸಿದ ಉತ್ಪನ್ನಗಳ ಮಾರಾಟ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಸಬಲರಾಗದ ಮಹಿಳೆಯರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆರ್ಥಿಕವಾಗಿ ಸಬಲರಾದ ಮಹಿಳೆಯರಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುವುದಿಲ್ಲ. ಆರ್ಥಿಕವಾಗಿ ಸಬಲರಲ್ಲದ ಮಹಿಳೆಯರಿಗೆ ಸಣ್ಣ ಸಮಸ್ಯೆಯೂ ಕೂಡ ದೊಡ್ಡ ಸಮಸ್ಯೆಯಾಗಿ ಕಂಡು ಬರುತ್ತಿದೆ. ಹಾಗಾಗಿ ಮಹಿಳೆಯರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ದೇಶಕ್ಕೆ ಸ್ವಾತಂತ್ರೃ ದೊರೆತ ನಂತರ ಹೆಣ್ಣು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಲು ಪ್ರಾರಂಭವಾಯಿತು. ಹೀಗಿದ್ದರೂ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಹಲವಾರು ಅಡೆತಡೆಗಳು ಇವೆ. ಈ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಮುಂದೆ ಬರಲು ಇಂತಹ ವೇದಿಕೆಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಮಹಿಳೆಯರಿಗೆ ಮನೆಯ ಜವಾಬ್ದಾರಿ ಮಾತ್ರ ಇತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಮನೆ ಜವಾಬ್ದಾರಿ ಜನತೆಗೆ ವೃತ್ತಿಯ ಜವಾಬ್ದಾರಿ ಸಹ ಹೆಗಲೇರಿದೆ. ಇಂದಿನ ಕಾಲಕ್ಕೆ ಇದು ಅನಿವಾರ್ಯವೂ ಹೌದು. ಮನೆ ಹಾಗೂ ವೃತ್ತಿ ಬದುಕನ್ನು ಸರಿದೂಗಿಸಿಕೊ ಂಡು ನಾವು ಮುಂದೆ ಸಾಗಬೇಕು, ಇದಕ್ಕೆ ತಾಳ್ಮೆ ಅವಶ್ಯಕ ಎಂದು ಹೇಳಿದರು.
ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚಾಗಿ ನಡೆಯುತ್ತಿದ್ದು, ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಳ್ಳಲು ಕೆಲವರು ಕಾಯುತ್ತಿರುತ್ತಾರೆ. ಹಾಗಾಗಿ ಜನರು ಆನ್‌ಲೈನ್ ಖರೀದಿಗೆ ಹೆಚ್ಚಿನ ಆದ್ಯತೆ ನೀಡುವ ಬದಲು ನೀವಿರುವ ಸ್ಥಳಗಳಲ್ಲಿಯೇ ವಸ್ತುಗಳನ್ನು ಖರೀದಿಸಲು ಆದ್ಯತೆ ನೀಡಿ. ಇದರಿಂದ ಮನೆ ಮಂದಿಯೆಲ್ಲ ಹೊರಗೆ ಹೋಗಿ ಸಮಯ ಕಳೆದಂತೆ ಆಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 300 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಾಕಷ್ಟು ಜನರು ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಅತಿ ವೇಗದಿಂದ ಹೆಚ್ಚಿನ ಪ್ರಮಾಣದ ಅಪಘಾತ ಸಂಭವಿಸುತ್ತಿದೆ. ಸಾಧ್ಯವಾದಷ್ಟು ಕಡಿಮೆ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡಿ. ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದರು.
ಮಹಿಳಾ ಸಮನ್ವಯ ಸಂಸ್ಥೆಯ ಜಿಲ್ಲಾ ಸಂಯೋಜಕಿ ಮಮತಾ ಕಿಣಿ ಮಾತನಾಡಿ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ಮಹಿಳೆಯರು ಬೆಳೆಯಬೇಕಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಸ್ಥೆಯ ಸಹ ಸಂಚಾಲಕಿ ಲಾವಣ್ಯ ಇದ್ದರು.