

ಮೈಸೂರು: ಚಂಪಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ಇತ್ತೀಚೆಗೆ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮ ಚಂಪಕ ರಾಷ್ಟ್ರೀಯ ಕಲಾ ಉತ್ಸವದಡಿ ಭಾರತೀಯ ಕಲೆಗಳನ್ನು ಪ್ರದರ್ಶಿಸಲಾಯಿತು. ರಾಮಕೃಷ್ಣ ನಗರದ ಚಂಪಕ ಅಕಾಡೆಮಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧನೆಗೈದ ಕಲಾವಿದರು ಭರತನಾಟ್ಯ ಪ್ರಸ್ತುತಿಪಡಿಸಿದರು.
ಚಂಪಕ ಅಕಾಡೆಮಿಯ ಸಂಸ್ಥಾಪಕಿ ಡಾ. ನಾಗಲಕ್ಷ್ಮಿ ನಾಗರಾಜನ್ ಅವರು, ಆದಿ ಗುರುಗಳ ಪ್ರಸಿದ್ಧ ಸಂಯೋಜನೆಗಳಿಗೆ ನರ್ತಿಸುವ ಮೂಲಕ ಆದಿ ಶಂಕರಾಚಾರ್ಯರಿಗೆ ಗೌರವ ಸಲ್ಲಿಸಿರು.
ಭಜ ಗೋವಿಂದಂ (ಮೋಹ ಮುದ್ಗರ) ಮತ್ತು ಪ್ರಭುಂ ಪ್ರಾಣನಾಥಂ (ಶಿವಾಷ್ಟಕಂ) ಗಳನ್ನು ಆಯ್ಕೆ ಮಾಡಿ, ಹಿಂದುಗಳನ್ನು ಒಗ್ಗೂಡಿಸುವಲ್ಲಿ ಸನಾತನ ರಾಷ್ಟ್ರವನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಿವಾವತಾರದ ಗುರುಗಳಿಗೆ ಗೌರವ ಸಲ್ಲಿಸಿದರು.
ನಗರದ ಸುಪ್ರಸಿದ್ಧ ಸಂಸ್ಥೆಯಾದ ಕಲಾಸಂದೇಶ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಗುರು ವಿದ್ವಾನ್ ಸಂದೇಶ್ ಭಾರ್ಗವ್ ಅವರ ಶಿಷ್ಯರಿಂದ ಭರತನಾಟ್ಯ ಪ್ರೇಕ್ಷಕರನ್ನು ಆಕರ್ಷಿಸಿದವು.
ಸಾಧನೆಗೈದ ವಿದುಷಿಗಳಾದ ಸಿಂಧು ನಿರಂಜನ್, ಅನುಷಾ ವರುಣ್, ಶಿಲ್ಪಾ ಕಾಂತರಾಜು, ಡಾ. ಗುಣಶೀಲ, ಹರ್ಷಿಣಿ ಪ್ರಜ್ವಲ್, ಅಕ್ಷತಾ ಪ್ರಮೋದ್, ಶೃತಿ, ಲಾವಣ್ಯ ಅವರು ತೀವ್ರ ಊರ್ಜೆ ಮತ್ತು ಕಲಾಭಿಮಾನದಿಂದ ನೃತ್ಯ ಸಾದರಪಡಿಸಿದರು.
ಬೆಂಗಳೂರಿನ ಶಾರದಾ ನಾಟ್ಯ ಕುಟೀರದ ವಿದುಷಿ ಮಿಲನಾ ಅವರು ತಮ್ಮ ಶಿಷ್ಯರೊಂದಿಗೆ ಪುಷ್ಪಾಂಜಲಿ, ಕೃತಿ ಭೋ ಶಂಭೋ, ತುಮಕ ಚಲತ ಭಜನೆ ಮತ್ತು ಇತರ ಪ್ರಸ್ತುತಿಗಳನ್ನು ಪ್ರದರ್ಶಿಸಿದರು.
ಮೈಸೂರಿನ ಸಿಎಫ್‌ಟಿಆರ್‌ಐ ಲೇಔಟ್ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷೆ ಕರುಣಾ ವೆಂಕಟರಾಮನ್ ಕಾರ್ಯಕ್ರಮ ಉದ್ಘಾಟಿಸಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮಹತ್ವದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ವಾನ್ ಸಂದೇಶ್ ಭಾರ್ಗವ್ ಅವರು, ಕಲೆ ಮತ್ತು ಕಲಾವಿದರ ಉನ್ನತಿಗಾಗಿ ಇಂತಹ ಮಾಸಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಚಂಪಕ ಅಕಾಡೆಮಿಯ ಪ್ರಯತ್ನ ಸದಾ ಮುಂದವರಿಯಲಿದೆ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಶಂಸಾ ಪತ್ರ ನೀಡಲಾಯಿತು.