ಬಲಿದಾನದ ಸಂಗತಿಗಳ ಮರು ದಾಖಲೀಕರಣ ಅಗತ್ಯ

13 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಂಪ್ರದಾಯಿಕ ಸ್ವಾತಂತ್ರ‍್ಯೋತ್ಸವದ ಜೊತೆಗೆ ಜಿಲ್ಲೆಯಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಘಟನೆಗಳು, ಐತಿಹಾಸಿಕತೆಯನ್ನು ಮೆಲುಕು ಹಾಕುವ ವಿಶಿಷ್ಟ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದೆ. ಅನೇಕರ ಬಲಿದಾನದ ಸಂಗತಿಗಳನ್ನು ಮರು ದಾಖಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಅಗತ್ಯವಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ ಮತ್ತು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯಿಂದ ಸ್ವಾತಂತ್ರ‍್ಯ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿರುವ ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬೈ ಪ್ರಾಂತ್ಯದ ಸ್ವಾತಂತ್ರ‍್ಯ ಹೋರಾಟಗಳ ನೇರ ಪ್ರಭಾವಕ್ಕೆ ಒಳಗಾಗಿದ್ದ ಧಾರವಾಡ, ಬೆಳಗಾವಿ, ಉತ್ತರ ಕರ್ನಾಟಕದ ಭಾಗದ ಜನರು ನಿರಂತರವಾಗಿ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಅವರ ಕುರಿತು ಸಂಶೋಧಕರು ಅಧ್ಯಯನ ಮಾಡಿ ಪುಸ್ತಕ ಪ್ರಕಟಿಸಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಉಪನ್ಯಾಸ, ವಸ್ತು ಮತ್ತು ಛಾಯಚಿತ್ರ ಪ್ರದರ್ಶನಗಳು ವಿದ್ಯಾಥಿಗಳಲ್ಲಿ ಜಿಲ್ಲೆಯ ಬಗ್ಗೆ ಅರಿವು, ಸ್ವಾಭಿಮಾನ ಮೂಡಿಸುತ್ತವೆ ಎಂದರು.
ಜಿಲ್ಲಾಽಕಾರಿ ದಿವ್ಯ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಮಾಜಿ ಸದಸ್ಯ ಐ.ಜಿ. ಸನದಿ, ಹು-ಧಾ ನಗರಾಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಶಾಕೀರ ಸನದಿ, ಇತಿಹಾಸ ತಜ್ಞ ಪ್ರಾಧ್ಯಾಪಕ ಡಾ. ಐ.ಕೆ. ಪತ್ತಾರ, ಗೋವಾ ಪತ್ರಗಾರ ಇಲಾಖೆ ನಿವೃತ್ತ ನಿರ್ದೇಶಕ ಡಾ. ಅರವಿಂದ ಯಾಳಗಿ, ಹಿರಿಯ ಕಲಾವಿದ ಬಿ. ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಪ್ರಾದೇಶಿಕ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಯಲಿಗಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net