ಅನುಭವ ಹಂಚಿಕೊಳ್ಳಲು ವಸ್ತುಪ್ರದರ್ಶನ ಸಹಕಾರಿ

NRD VASTU PRADARSHAN
Published on

ನರಗುಂದ: ಶಾಲಾ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅನುಭವ ಪಡೆಯುವುದು ಮುಖ್ಯ. ಕಲಿತ ಎಲ್ಲ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ವಸ್ತುಪ್ರದರ್ಶನಗಳು ಬಹುಮುಖ್ಯವಾಗಿವೆ. ಇಂತಹ ವಸ್ತುಪ್ರದರ್ಶನಗಳನ್ನು ಸರಿಯಾದ ರೂಪದಲ್ಲಿ ಎಲ್ಲ ಶಾಲೆಗಳು ಜಾರಿ ಮಾಡುವುದು ಕಡ್ಡಾಯ ಎಂದು ಸಿಆರ್​ಪಿ ಬಿ.ಆರ್. ರಾಯನಗೌಡ್ರ ತಿಳಿಸಿದರು.

ಪಟ್ಟಣದ ಬಸವೇಶ್ವರ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಲಾ ಅವಧಿಯಲ್ಲಿ ಇಂತಹ ಕಾರ್ಯಕ್ರಮಗಳು ಬಹುಮುಖ್ಯವಾಗಿದ್ದು, ಇದರ ಪ್ರಯೋಜನ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಬಿಆರ್​ಪಿ ಅಧಿಕಾರಿ ಜಿ.ಎನ್. ದೊಡ್ಡಲಿಂಗಪ್ಪನವರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಶಾಲಾ ಮಕ್ಕಳಿಗೆ ಸ್ಪರ್ಧಾತ್ಮಕವಾದ ಸಂಗತಿಗಳಿದ್ದು, ಅವುಗಳನ್ನು ಚೆನ್ನಾಗಿ ಅರ್ಥೈಯಿಸಿಕೊಂಡು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ವಿಜ್ಞಾನ ಇಂದು ಬಹು ಎತ್ತರಕ್ಕೆ ಬೆಳೆದಿದೆ. ಅದರ ಅನೇಕ ಪ್ರಯೋಗಗಳನ್ನು ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಲಾ ಸಂಸ್ಥೆ ಚೇರ್ಮನ್ ಚನ್ನಬಸಪ್ಪ ಕಂಠಿ, ಮುಖ್ಯೋಪಾಧ್ಯಾಯಿನಿ ಆಪ್ರೀನ್ ಪಟೇಲ್, ಶಾಲಾ ಆಡಳಿತಾಧಿಕಾರಿ ಕಾವೇರಿ ಪಾಟೀಲ, ವಿಜ್ಞಾನ ವಿಭಾಗದ ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net