

ಮಂಗಳೂರು: ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಗರೋಡಿ ಮುಂಭಾಗದ ಸಮೃದ್ಧಿ ಸಭಾಭವನದಲ್ಲಿ ಭಾನುವಾರ ನಡೆಯಿತು.
ಸದಸ್ಯರ ಮನೆಯಲ್ಲಿ ತಯಾರಿಸಿದ 40ಕ್ಕಿಂತಲೂ ಹೆಚ್ಚು ಬಗೆಯ ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಸುಗಳನ್ನು ಕಾರ್ಯಕ್ರಮದ ಆಹ್ವಾನಿತರಿಗೆ ಬಡಿಸಲಾಯಿತು. ತುಳುನಾಡಿನ ಮನೆಗಳಲ್ಲಿ ಉಪಯೋಗಿಸುತ್ತಿದ್ದ ಹಳೇ ವಸ್ತುಗಳು, ಪಾತ್ರೆಗಳು, ಪೀಠೋಪಕರಣಗಳು, ಕೃಷಿ ಪರಿಕರಗಳನ್ನು ಪ್ರದರ್ಶನ ಮಾಡಲಾಯಿತು. ಸಂಘದ ಅಧ್ಯಕ್ಷ ಮಹಾಬಲ ಎಂ. ಉದ್ಘಾಟಿಸಿದರು. ದ.ಕ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಮುಖ್ಯ ಕಾರ್ಯದರ್ಶಿ ತಾರಾನಾಥ ಕೊಟ್ಟಾರಿ ಅತಿಥಿಯಾಗಿದ್ದರು. ಉಪಾಧ್ಯಕ್ಷ ಸತೀಶ್ ಕುಮಾರ್ ಜೋಗಿ ಸ್ವಾಗತಿಸಿದರು. ಕಾರ್ಯದರ್ಶಿ ದೇವಾನಂದ ವಂದಿಸಿದರು. ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಿ ಕಳಂಜ ವೇಷಭೂಷಣ ಪ್ರದರ್ಶಿಸಲಾಯಿತು.
ಉಪಾಧ್ಯಕ್ಷ ದಿನಕರ್ ಸುವರ್ಣ, ಕೋಶಾಧಿಕಾರಿ ಸುರೇಶ್ ಜೆ, ಅಶೋಕ್ ಕುಲಾಲ್ ಉಪಸ್ಥಿತರಿದ್ದರು. ವಾರಿಣಿ ಕಾರ್ಯಕ್ರಮ ನಿರೂಪಿಸಿದರು.