ಕೃಷಿ ಕ್ಷೇತ್ರ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ

25 june tnp 01
ತಿ.ನರಸೀಪುರ ತಾಲೂಕಿನ ಯಾಚೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ತೋಟಗಾರಿಕೆ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಯಿತು. ನಾದನಂದನಾಥ ಸ್ವಾಮೀಜಿ, ವೈ.ಎನ್.ಶಂಕರೇಗೌಡ, ಜೆ.ಸುನೀತಾ ವೀರಪ್ಪಗೌಡ, ವೈ.ಹೆಚ್.ಹನುಮಂತೇಗೌಡ, ವೈ.ಸಿ.ಶಿವಕುಮಾರ್, ರೇಣುಕಾ ಮಹದೇವು, ವೈ.ಕೆ.ಉಮೇಶ್, ವೈ.ಎಂ.ನಾಗರಾಜು ಇತರರು ಇದ್ದರು.
Published on

ತಿ.ನರಸೀಪುರ: ತೋಟಗಾರಿಕೆ ಕೃಷಿಯ ಕಾರ್ಯಾನುಭವದಲ್ಲಿ ನಾಡಿನ ರೈತರು ಸಮರ್ಥರಾಗಿರುವುದರಿಂದ ದೇಶದ ನೆರೆ ರಾಜ್ಯಗಳಿಗಿಂತಲೂ ಉತ್ತಮ ಪ್ರಗತಿ ಸಾಧಿಸಿದ್ದಾರೆ ಎಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಯಾಚೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೈಸೂರು ತೋಟಗಾರಿಕೆ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಅಂತಿಮ ವರ್ಷದ ಬಿಎಸ್ಸಿ ತೋಟಗಾರಿಕೆ ಪದವಿ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದ ವಸ್ತುಪ್ರದರ್ಶನ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೃಷಿಗೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ರೈತರಿಗೆ ಮತ್ತಷ್ಟು ಪ್ರೋತ್ಸಾಹದ ಜತೆಗೆ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಿದರೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ. ಪ್ರಸ್ತುತ ತೋಟಗಾರಿಕೆ ಕ್ಷೇತ್ರದ ಪ್ರಗತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೋಟಗಾರಿಕೆ ಉತ್ಪಾದನೆಯನ್ನು ನಿರೀಕ್ಷಿಸಬಹುದು ಎಂದು ಹೇಳಿದರು.

ರೈತರ ಅಭಿವೃದ್ಧಿಗಾಗಿ ಸರ್ಕಾರ ಕೃಷಿ, ತೋಟಗಾರಿಕಾ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳ ಕುರಿತು ರೈತರಿಗೆ ಮಾಹಿತಿಯ ಕೊರತೆ ಇದೆ. ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಗ್ರಾಮೀಣ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಿ, ಹೆಚ್ಚಿನ ರೈತರನ್ನು ಸೇರಿಸಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಕುರಿತು ಸಲಹೆ ನೀಡಬೇಕು. ಗ್ರಾಮೀಣ ಕಾರ್ಯಾನುಭವ ಶಿಬಿರಗಳಲ್ಲಿ ತೋಟಗಾರಿಕೆ ಕೃಷಿಯನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ರೈತರಿಗೆ ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ತಿಳಿಸಿಕೊಡಬೇಕು. ಕೃಷಿ ಜತೆಗೆ ಉಪಕಸುಬುಗಳ ಬಗ್ಗೆಯೂ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆದ ತಕ್ಷಣ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿ ಇವತ್ತಿನ ಪರಿಸ್ಥಿತಿಯಲ್ಲಿಲ್ಲ. ಇಂಜಿನಿಯರಿಂಗ್, ಆರ್ಟಿಕಲ್ಚರ್, ಅಗ್ರಿಕಲ್ಚರ್ ಪದವಿ ವಿದ್ಯಾರ್ಥಿಗಳು ಹೆಚ್ಚಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳದೆ, ಬುದ್ಧಿವಂತಿಕೆಯಿಂದ ಸ್ವಯಂ ಉದ್ಯೋಗ ಮಾಡುವತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತರಿಗೆ ಸನ್ಮಾನ, ಕ್ರೀಡೆಯಲ್ಲಿ ವಿಜೇತರಾದ ರೈತರಿಗೆ ಬಹುಮಾನ ವಿತರಿಸಲಾಯಿತು. ಶಾಲಾವರಣದಲ್ಲಿ ತೋಟಗಾರಿಕೆಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನ ಗಮನ ಸೆಳೆಯಿತು.

ಶ್ರೀ ರಾಮಕೃಷ್ಣ ಸೇವಾ ಕೇಂದ್ರದ ನಾದನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಜಿ.ಜನಾರ್ದನ್, ಮಂಡ್ಯ ವಿಸಿ ಫಾರಂ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ಟಿ.ಶಿವಶಂಕರ್, ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಟಿ.ನಾಗರಾಜು, ವೈ.ಎಚ್.ಹನುಮಂತೇಗೌಡ, ತಾಪಂ ಮಾಜಿ ಅಧ್ಯಕ್ಷ ಸುಧೀರ್, ಗ್ರಾಪಂ ಅಧ್ಯಕ್ಷ ವೈ.ಸಿ.ಶಿವಕುಮಾರ್, ಅಂಕನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಾ ಮಹದೇವು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೈ.ಕೆ.ಉಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ.ನಾಗರಾಜು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಎಂ.ಶಾಂತಾ, ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್.ಸುಹಾಸಿನಿ, ಕೃಷಿ ಅಧಿಕಾರಿ ಎಲ್.ವಿಶಾಲು, ಬಿ.ಪಿ.ರಾಘವೇಂದ್ರ, ಡಾ.ವಿಷಕಂಠಪ್ಪ, ವೈ.ಎನ್.ಕೆಂಪೇಗೌಡ, ಕೃಷ್ಣಗೌಡ, ಸಹ ಸಂಯೋಜಕ ಜಿ.ಕೆ.ರಾಮೇಗೌಡ, ಸಂಯೋಜಕಿ ಡಾ.ಮಮತಲಕ್ಷ್ಮೀ, ಪಿಎಸಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ವೈ.ಕೆ.ಕ್ಯಾತೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net