

ಮೂಡಿಗೆರೆ: ವಿದ್ಯಾರ್ಥಿಗಳಲ್ಲಿ ಕೂತೂಹಲ ಮೂಡಿಸಲು ಹಾಗೂ ಅವರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಉತ್ತೇಜಿಸಲು ಪ್ರತಿ ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ವಿಜ್ಞಾನ ವಿಭಾಗದಲ್ಲಿ ಮಕ್ಕಳ ಕಲಿಕೆಗೆ ಉತ್ತೇಜನ ದೊರೆಯುತ್ತದೆ ಎಂದು ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಹೇಳಿದರು.
ಎಂಇಎಸ್ ಶಾಲೆಯಲ್ಲಿ 25ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ನಾನಾ ವಿಭಾಗದಲ್ಲಿ ನಡೆಯುವ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮೂಡಿಸುತ್ತದೆ. ವಿಮರ್ಶನಾತ್ಮಕವಾಗಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನ ಕ್ಷೇತ್ರ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗಿದೆ. ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಇತರೆ ಚಟುವಟಿಕೆಗಳನ್ನು ಮುಂದುವರೆಸಲು ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ತಿಳಿಸಿದರು.
ಹರೀಶ್ ಪಿಯು ಕಾಲೇಜ್ ಮ್ಯಾನೆಜಿಂಗ್ ಟ್ರಸ್ಟಿ ಎಂ.ಎಸ್.ಹರೀಶ್ ಮಾತನಾಡಿ, ಮಾನವ ಜನ್ಮ ಉಗಮದಿಂದಲೇ ವೈಜ್ಞಾನಿಕ ಚಿಂತನೆ ಪ್ರಾರಂಭವಾಗಿದೆ. ಅದು ಹೆಮ್ಮರವಾಗಿ ಬೆಳೆದು ಇಂದು ತಂತ್ರಜ್ಞಾನ ಯುಗವಾಗಿ ಪರಿವರ್ತನೆಗೊಂಡಿದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ವೈಜ್ಞಾನಿಕ ಗುಣ ಬೆಳೆಯಲು ಶೈಕ್ಷಣಿಕ ಪಯಣದಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವಸ್ತು ಪ್ರದರ್ಶನದಲ್ಲಿ ಅರಣ್ಯ ರಕ್ಷಣೆ, ವಾಯು ಮಾಲಿನ್ಯ, ಸೋಲಾರ್ ಪ್ಲಾಂಟ್, ಫಾಲ್ಸ್, ಪವರ್ ಪ್ಲಾಂಟ್, ಹೈಕೋರ್ಟ್, ಎಲೆಕ್ಟಿಕ್ ಟ್ರಾನ್ಸ್ ಪೋರ್ಟ, ಚಂದ್ರಯಾನ, ರೋಬರ್ಟ, ಏರ್‌ಕೂಲರ್, ವಿವಿಧ ಬಗೆಯ ಹೂಗಳು, ಜೀವಜಂತುಗಳು, ವಿವಿಧ ದೇಶದ ನಾಣ್ಯಗಳು ಸೇರಿದಂತೆ ಅನೇಕ ಪ್ರಯೋಗ ಮಾದರಿಗಳು ರೋಮಾಂಚನಕಾರಿಯಾಗಿವೆ ಎಂದರು.
ಎಂಇಎಸ್ ಶಾಲೆ ಪ್ರಾಚಾರ್ಯೆ ಚಿಂತು, ಪಿಎಸ್‌ಐ ಚಂದ್ರಶೇಖರ್ ಇತರರಿದ್ದರು.