ಆಮಿಷಕ್ಕೆ ಒಳಗಾಗದೆ ನಿಮ್ಮ ಹಕ್ಕು ಚಲಾಯಿಸಿ

voter day
Published on

ಮೈಸೂರು; ಪ್ರತಿಯೊಬ್ಬ ಮತದಾರರು ಯಾವುದೇ ಆಸೆ ಆಮಿಷ ಹಾಗೂ ಪ್ರಭಾವಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಬೇಕು ಎಂದು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮೈಸೂರು ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನಮ್ಮನ್ನು ಆಳುವ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಪವಿತ್ರವಾದ ಮತದಾನ ಪ್ರಕ್ರಿಯೆಯಲ್ಲಿ ಅರ್ಹರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೇಳಿದರು.


ರಾಷ್ಟ್ರೀಯ ಮತದಾರರ ದಿನವನ್ನು ಹಬ್ಬವಾಗಿ ಆಚರಣೆ ಮಾಡುತ್ತಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಈ ವರ್ಷ ಹೊಸದಾಗಿ ಮತದಾರರ ಪಟ್ಟಿಗೆ ಜಿಲ್ಲೆಯಲ್ಲಿ 80 ಸಾವಿರ ಹೊಸ ಮತದಾರರು ಸೇರ್ಪಡೆ ಆಗಬೇಕಿತ್ತು. ಆದರೆ ಇಲ್ಲಿವರೆಗೆ 50 ಸಾವಿರ ಜನರು ಮಾತ್ರ ನೋಂದಣಿ ಆಗಿದೆ. ಉಳಿದವರು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ಜಿಲ್ಲೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಪುರುಷರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.


ಮಾಜಿ ಕ್ರಿಕೆಟಿಗ, ಸ್ವೀಪ್ ಸಮಿತಿಯ ರಾಯಭಾರಿ ಜಾವಗಲ್ ಶ್ರೀನಾಥ್ ಮಾತನಾಡಿ, ಯುವಜನರಿಗೆ ಅಮೂಲ್ಯವಾದ ಮತದಾನದ ಹಕ್ಕು ಬಂದಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದಲ್ಲಿ ಹೆಚ್ಚಿನ ನೂಕುನುಗ್ಗಲು ಆಗದಂತೆ ಹೆಚ್ಚಿನ ಬೂತ್‌ಗಳನ್ನು ಅಧಿಕಾರಿಗಳು ತೆರೆಯಬೇಕು ಎಂದು ಸಲಹೆ ನೀಡಿದರು.


ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮವಾಗಿ ಮತದಾನ ಆಗುತ್ತದೆ. ಆದರೆ, ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆ ಆಗುತ್ತದೆ. ಮುಂದೆ ಈ ರೀತಿ ಆಗದೆ ನಗರ ಪ್ರದೇಶಗಳಲ್ಲೂ ಹೆಚ್ಚು ಮತದಾನ ಆಗಬೇಕು ಎಂದರು.


ಮತದಾನ ನಮಗೆ ದೊರೆತಿರುವ ಅಮೂಲ್ಯವಾದ ಹಕ್ಕು. ಮತವನ್ನು ಮಾರಾಟ ಮಾಡಿಕೊಳ್ಳಬಾರದು. ಮಾರಾಟ ಮಾಡಿಕೊಂಡರೆ ನಿಮ್ಮನ್ನು ನೀವು ಮಾರಾಟ ಮಾಡಿಕೊಂಡಂತೆ. ಸಂವಿಧಾನ ನಮಗೆ ಹಕ್ಕು ಹಾಗೂ ಸ್ವಾತಂತ್ರ್ಯ ಕೊಟ್ಟಿದೆ ಎಂದರು.


ಜಿಪಂ ಸಿಇಒ, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಕೆ.ಎಂ ಗಾಯತ್ರಿ ಮಾತನಾಡಿ, 2011ರಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಅರ್ಹ ಪ್ರತಿಯೊಬ್ಬರನ್ನೂ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು, ಮತದಾನದ ಬಗ್ಗೆ ಅರಿವು ಮೂಡಿಸುವುದು ಸ್ವೀಪ್‌ನ ಉದ್ದೇಶ ಎಂದರು.


ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾಗಿರುವ ಯುವ ಜನರಿಗೆ, ಅಂಗವಿಕಲರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ 22 ಬಿಎಲ್‌ಒ, ಇಎಲ್‌ಸಿಗಳಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಲಾಯಿತು. ಮತದಾನ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.


ಅಪರ ಜಿಲ್ಲಾಧಿಕಾರಿ ಆರ್.ಲೋಕನಾಥ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣಂ ರಾಜು, ಯೋಗಪಟು ಖುಷಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net