

ಸೋಮವಾರಪೇಟೆ: ಮತದಾನದ ಹಕ್ಕು ಪವಿತ್ರವಾದುದು. ಯುವ ಜನಾಂಗ ಮತದಾನದ ಹಕ್ಕನ್ನು ಚಲಾಯಿಸಿ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ಸಿ.ರೇಖಾ ಹೇಳಿದರು.
ತಾಲೂಕು ಆಡಳಿತ ಮತ್ತು ಸೋಮವಾರಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಎಂಬುದು ಸಂವಿಧಾನ ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ. ಜತೆಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಅರ್ಹ ಪ್ರತಿನಿಧಿಯನ್ನು ಆರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಯುವಜನಾಂಗ ಮತ್ತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜ.25ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲೂಕು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಮಾತನಾಡಿ, ಯುವ ಮತದಾರರ ಮತದಾನ ಶೇ.100 ರಷ್ಟು ಪ್ರಗತಿ ಸಾಧಿಸಬೇಕೆಂಬುದು ಚುನಾವಣಾ ಅಯೋಗದ ನಿರೀಕ್ಷೆಯಿದೆ. ಯುವ ಸಮುದಾಯ ಮತದಾನ ಮಾಡಬೇಕು. ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು. 18 ವರ್ಷ ತುಂಬಿದ ತಕ್ಷಣ ಅಗತ್ಯ ದಾಖಲಾತಿಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಸುಭದ್ರ ಭಾರತ ಕಟ್ಟುವ ಜವಾಬ್ದಾರಿ ಯುವಜನಾಂಗ ಕೈಯಲ್ಲಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್‌ಗೌಡ ಮಾತನಾಡಿ, ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ಉದ್ದೇಶದಿಂದ 1950ರಲ್ಲಿ ಸ್ಥಾಪನೆಯಾದ ಚುನಾವಣಾ ಅಯೋಗದ ಸಂಸ್ಥಾಪನ ದಿನದ ನೆನಪಿಗಾಗಿ 2011ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ದೇಶದ ಪ್ರಗತಿಗೆ ಪ್ರತಿಯೊಬ್ಬ ಪ್ರಜೆಯ ಮತ ಅಗತ್ಯ. ವಿದ್ಯಾರ್ಥಿಗಳು ಮತದಾನ ಮಾಡಬೇಕು. ಅಭ್ಯರ್ಥಿಗಳು ಯೋಗ್ಯರಲ್ಲ ಎನಿಸಿದರೆ, ನೋಟಾದಲ್ಲೂ ಮತ ಚಲಾಯಿಸಬಹುದು ಎಂದು ಹೇಳಿದರು.
ಸೋಮವಾರಪೇಟೆ ಜೆಎಂಎಫ್‌ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಗೋಪಾಲಕೃಷ್ಣ, ಸಿಆರ್‌ಪಿ ಪ್ರೇಮಾ ಮತದಾನದ ಮಹತ್ವದ ಕುರಿತು ಮಾತನಾಡಿದರು.
ಉಪ ಪ್ರಾಂಶುಪಾಲ ರಜಿತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಶ್ರೀದೇವಿ, ಉಪನೋಂದಣಾಧಿಕಾರಿ ಮಹಮ್ಮದ್ ಆಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಅಬಕಾರಿ ಉಪ ನಿರೀಕ್ಷಕರಾದ ಸುಮತಿ ಹಾಗೂ ಶಿಕ್ಷಕಿಯರಾದ ಸೌಮ್ಯಾ, ದಿವ್ಯಾ, ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.