ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸಿ

21 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ನಡೆಯಲಿದೆ. ಅರ್ಹ ಮತದಾರರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು. ಮತದಾನ ದಿನದಂದು ರಜೆ ಇದೆ ಎಂದು ಪ್ರವಾಸಕ್ಕೆ ತೆರಳಬಾರದು ಎಂದು ಜಿಲ್ಲಾ ಸ್ವೀಪ್​ ನೋಡಲ್​ ಅಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಶನಿವಾರ ಏರ್ಪಡಿಸಿದ್ದ ಮತದಾನ ಜಾಗೃತಿಯ ಸ್ವೀಪ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾನ ಹೆಚ್ಚಳದಿಂದ ಮತದಾರನ ಗೌರವ ಹೆಚ್ಚುತ್ತದೆ. ಮತದಾರನ ಗೌರವ ಹೆಚ್ಚಳದಿಂದ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆಗೆ ಹೆಚ್ಚು ಬೆಲೆ ಬರುವ ಮೂಲಕ ಸಾರ್ವತ್ರಿಕ ಚುನಾವಣೆಯ ಮೌಲ್ಯ ಹೆಚ್ಚುತ್ತದೆ. ಹೀಗಾಗಿ ನಾವು ಮತದಾನ ಮಾಡುವ ಮೂಲಕ ನೆರೆ ಹೊರೆಯವರಿಗೂ, ನೆಂಟರಿಗೂ ಮತದಾನ ಮಾಡಲು ಪ್ರೋತ್ಸಾಹಿಸಬೇಕು ಎಂದರು.
ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಬಿಎಲ್​ಒಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಮಾಹಿತಿಯ ವೋಟರ್​ ಸ್ಲೀಪ್​ ಹಾಗೂ ಗೈಡ್​ ಸಹ ಮನೆ ಮನೆ ಒದಗಿಸುವರು. ಈಗಾಗಲೇ ನೋಂದಾಯಿತರಾಗಿರುವ 85ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಕರಿಗೆ, ಅಂಗವಿಕಲರಿಗೆ ಮನೆಯಿಂದ ಮತದಾನಕ್ಕೆ ಅವಕಾಶವಿದ್ದು, ಜಿಲ್ಲಾ ಚುನಾವಣಾಧಿಕಾರಿ ಕ್ರಮ ವಹಿಸಿದ್ದಾರೆ ಎಂದರು.
ಅಧಿಕಾರಿಗಳಿಗೆ ಹಾಗೂ ಉದ್ಯೋಗಿಗಳಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ, ಉಪ ನಿರ್ದೇಶಕ ಡಾ. ಭೀಮಪ್ಪ ಎಂ.ಎನ್​, ಕೈಗಾರಿಕೆಯ ವ್ಯವಸ್ಥಾಪಕ ಸೂರ್ಯಪ್ರಕಾಶ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net