ರಾಜಕೀಯ ಅಧಿಕಾರ ನೀವೆ ಚಲಾಯಿಸಿ

ctd 8 mahila dinacharane-02
Published on

ಚಿತ್ರದುರ್ಗ:  ಸ್ಥಳೀಯ ಸಂಸ್ಥೆಗಳಲ್ಲಿ ತಮಗೆ ದೊರಕಿರುವ ರಾಜಕೀಯ ಅಧಿಕಾರವನ್ನು ಖುದ್ದು ಚಲಾಯಿಸಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಹಿಳಾ ಜನ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ತರಾಸು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲು ಇದೆ. ಆದ್ದರಿಂದ ಅನೇಕರು ಇಂದು ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರಾಗಿದ್ದಾರೆ. ಆದರೆ ಅಧಿಕಾರವನ್ನು ಪತಿ ಅಥವಾ ಮಕ್ಕಳು ಚಲಾಯಿಸುತ್ತಿದ್ದಾರೆ. ಇದು ಬದಲಾಗಬೇಕು ಎಂದರು.

ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ನೀಡಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಿತಿಗತಿಗಳು ಬದಲಾಗಬಹುದು ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ ಮಾದರಿ ಎನಿಸಿದ ಅಮೆರಿಕದಲ್ಲಿ ಮಹಿಳೆ ಅಧ್ಯಕ್ಷೆಯಾಗಿಲ್ಲ. ಆದರೆ, ಶ್ರೀಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾ ಸೇರಿ ಏಷ್ಯಾದ ದೇಶಗಳಲ್ಲಿ ಮಹಿಳೆಯರು ಪ್ರಧಾನ ಮಂತ್ರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣಕ್ಕೆ ಅನೇಕ ಯೋಜನೆ ರೂಪಿಸಿದ್ದಾರೆ. ಲಿಂಗಾನುಪಾತದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚಾಗಿದೆ ಎಂದರು.

ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರ ಅಗಾಧ. ಮಹಿಳೆಯರಲ್ಲಿ ನಿಷ್ಠೆ, ಆತ್ಮವಿಶ್ವಾಸ, ಸ್ವಾಭಿಮಾನ ಇದೆ. ಹಾಗಾಗಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಬ್ಯಾಂಕ್‌ಗಳು ಆರ್ಥಿಕವಾಗಿ ಸಹಾಯ ಮಾಡುತ್ತವೆ ಎಂದರು.

ಗ್ರಾಪಂಗಳಲ್ಲಿ ಕಸ ವಿಂಗಡಣೆ ಜವಾಬ್ದಾರಿಯೊಂದಿಗೆ, ಕಸ ವಿಂಗಡಣೆ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ. 97 ಮಹಿಳೆಯರ ತರಬೇತಿ ಪೂರ್ಣಗೊಂಡಿದ್ದು, 31 ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ. 74 ಮಹಿಳೆಯರು ಚಾಲಕರಾಗಿದ್ದಾರೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅತ್ಯುತ್ತ ಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ‌್ಯಕರ್ತೆಯರು, ಸಹಾಯಕರು ಹಾಗೂ ಅಸಾಧಾರಣ ಸಾಧನೆ ಮಾಡಿದ ಜಿಲ್ಲೆಯ ಮಕ್ಕಳನ್ನು ಸನ್ಮಾನಿಸಲಾಯಿತು. ಉತ್ತಮ ಸಾಧನೆ ತೋರಿದ ಗ್ರಾಪಂ ಮಹಿಳಾ ಒಕ್ಕೂಟಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಅಂಗನವಾಡಿ ಕಾರ‌್ಯಕರ್ತೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕುಡಾ ನಾಮ ನಿರ್ದೇಶನ ಸದಸ್ಯೆ ರೇಖಾ, ಎನ್ ಆರ್‌ಎಂಎಲ್ ಯೋಜನಾ ನಿರ್ದೇಶಕ ಕೆ.ಎನ್.ಮಹಾಂತೇಶಪ್ಪ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಕೊಲ್ಲಿ ಲಕ್ಷ್ಮೀ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಡಿ. ಕೆ.ಶೀಲಾ, ಬಾಲನ್ಯಾಯ ಮಂಡಳಿ ಸದಸ್ಯೆ ಸುಮನಾ ಅಂಗಡಿ ಇತರರು ಇದ್ದರು. ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಎನ್‌ಆರ್‌ಎಲ್‌ಎಂ-ಸಂಜೀವಿನಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net