ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಸಹಕಾರಿ

ಚಿತ್ರ 5ಎಸ್ ಡಿ ಪಿ 01.
ಸಿದ್ದಾಪುರದಲ್ಲಿ ಶಾ ನ್ಯೂ ಫಿಟ್ನೆಸ್ ಜಿಮ್ ಸೆಂಟರ್‌ಅನ್ನು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಸೋಮವಾರ ಉದ್ಘಾಟಿಸಿದರು.
Published on

ಸಿದ್ದಾಪುರ: ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡಲು ಕ್ರೀಡಾ ಚಟುವಟಿಕೆಗಳೊಂದಿಗೆ ವ್ಯಾಯಾಮ ಶಾಲೆಯ ಕಲಿಕೆಯೂ ಸಹಕಾರಿಯಾಗಲಿದ್ದು ಇದರ ಸದುಪಯೋಗಪಡಿಸಿಕೊಂಡು ಆರೋಗ್ಯ ಕಾಳಜಿಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಕರೆ ನೀಡಿದರು.

ಸಿದ್ದಾಪುರದಲ್ಲಿ ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಕಟ್ಟಡದಲ್ಲಿ ನೂತನ ಅತ್ಯಾಧುನಿಕ ಕಲಿಕಾ ಯಂತ್ರೋಪಕರಣಗಳೊಂದಿಗೆ ಪ್ರಾರಂಭಗೊಂಡಿರುವ ಶಾ ನ್ಯೂ ಫಿಟ್ನೆಸ್ ಜಿಮ್ ಸೆಂಟರ್‌ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಹಾಗೂ ಮಾನಸಿಕ ಒತ್ತಡಗಳ ನಡುವೆ ಯುವ ಸಮೂಹ ಮಾದಕ ವ್ಯಸನಿಗಳಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರ ತಂದಿದೆ. ದಾರಿ ತಪ್ಪುತ್ತಿರುವ ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು ಕ್ರೀಡಾ ಹಾಗೂ ಜಿಮ್ ಕಲಿಕೆಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದೆ ಬರಬೇಕೆಂದರು.

ಜಿಮ್ ಸೆಂಟರ್‌ನ ತರಬೇತುದಾರರು, ಮಾರ್ಗದರ್ಶಕರು ಶಾಲಾ ವಿದ್ಯಾರ್ಥಿಗಳು ಹಾಗೂ ಯುವ ಸಮೂಹಕ್ಕೆ ಜಾಗೃತಿ ಹಾಗೂ ಮಾರ್ಗದರ್ಶನ ನೀಡುವುದರ ಮೂಲಕ ಕಲಿಕೆಗೆ ಸಹಕಾರ ನೀಡಿ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದರು.

ಜಿಮ್ ತರಬೇತುದಾರ ಸಜೀಶ್ ಮಾತನಾಡಿ, ಆರೋಗ್ಯ ಕಾಳಜಿಯ ಮೂಲಕ ಸಮತೋಲನ ಆಹಾರದೊಂದಿಗೆ ಕ್ರಮಬದ್ಧ ವ್ಯಾಯಾಮ ಕೂಡ ಅತ್ಯವಶ್ಯಕವಾಗಿದೆ. ಮಾನಸಿಕ ಒತ್ತಡಗಳಿಂದ ದೂರವಿರಲು ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಯುವ ಸಮೂಹಕ್ಕೆ ಜಿಮ್ ಕಲಿಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಯುವಕ-ಯುವತಿಯರು ಜಿಮ್ ಕಲಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಎಂದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎ.ಆನಂದ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಜಿತ್‌ಕುಮಾರ್, ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜು, ಶೀಲಾ, ತರಬೇತುದಾರ ರತೀಶ್, ಪಾಲಿಬೆಟ್ಟದ ವಿಜೇಶ್, ಪುಷ್ಪಾ, ಪ್ರವೀಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net