ರೌಡಿ ಪಟ್ಟಿಯಿಂದ ವಿಮುಕ್ತಿ

roudi
Published on

ಮರಿದೇವ ಹೂಗಾರ ಹುಬ್ಬಳ್ಳಿ

ವಾಣಿಜ್ಯ ನಗರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಗಳಿಗೆ ಕಾರಣವಾಗುವ ರೌಡಿಶೀಟರ್​ಗಳನ್ನು ಸನ್ನಡತೆ ಸೇರಿ ಇತರ ಆಧಾರದ ಮೇಲೆ ಪಟ್ಟಿಯಿಂದ ಕೈಬಿಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಐದೂವರೆ ವರ್ಷದಲ್ಲಿ ಒಟ್ಟು 530 ರೌಡಿಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ.

ಕೆಲ ಮಾಹಿತಿಗಳನ್ನು ಆಧರಿಸಿ ಪ್ರತಿ ವರ್ಷ ರೌಡಿಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ. ಅಂತೆಯೇ ಹು-ಧಾ ವ್ಯಾಪ್ತಿಯಲ್ಲಿ 2018ರಿಂದ 2023ರವರೆಗೆ ಬಹಳಷ್ಟು ರೌಡಿಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ‘ವಿಜಯವಾಣಿ’ಗೆ ಲಭ್ಯ ಅಂಕಿ-ಅಂಶಗಳು ಈ ಮಾಹಿತಿಯನ್ನು ಹೇಳುತ್ತಿವೆ. ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿಗಳಿದ್ದಾರೆ. ಪ್ರತಿ ವರ್ಷ ರೌಡಿ ಪಟ್ಟಿಯಲ್ಲಿ ಹಲವರ ಹೆಸರು ಸೇರ್ಪಡೆಯಾಗುತ್ತ ಹೋಗುತ್ತದೆ. ಕೊಲೆ, ಸುಲಿಗೆ, ದೊಂಬಿ, ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾದವರು ರೌಡಿಶೀಟಗೆ ಸೇರ್ಪಡೆಯಾಗುತ್ತಾರೆ. ಅದೂ ಒಬ್ಬರ ಮೇಲೆ ಒಂದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದರೆ ಮಾತ್ರ.

ಇದೇ ಆಧಾರದಲ್ಲಿ ಪ್ರತಿ ವರ್ಷ ರೌಡಿಗಳ ಹೊಸ ಪಟ್ಟಿ ನಿರ್ಮಾಣ ಮತ್ತು ಸನ್ನಡತೆ ಆಧರಿಸಿ ಬಿಡುಗಡೆ ಪ್ರಕ್ರಿಯೆ ನಡೆಯುತ್ತದೆ. ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 2018ರಲ್ಲಿ 13, 2019ರಲ್ಲಿ 20, 2020ರಲ್ಲಿ 11, 2021ರಲ್ಲಿ 17, 2022ರಲ್ಲಿ 9 ಹಾಗೂ 2023ರಲ್ಲಿ 480 ರೌಡಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಲ್ಲ ವರ್ಷಗಳಿಗಿಂತ 2023ರಲ್ಲಿಯೇ ಅತಿ ಹೆಚ್ಚು ರೌಡಿಗಳನ್ನು ಪಟ್ಟಿಯಿಂದ ವಿಮುಕ್ತಗೊಳಿಸಲಾಗಿದೆ.

ಮಾಹಿತಿ ಗೌಪ್ಯ: ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ತೆರೆಯುವ ರೌಡಿ ಪಟ್ಟಿಯಲ್ಲಿ ಯಾರ ಹೆಸರಿದೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಕೊಡಲು ಬರುವುದಿಲ್ಲ. ಇದೆಲ್ಲದರ ಮಾಹಿತಿಯು ಕರ್ನಾಟಕ ಅಧಿನಿಯಮ ಆದೇಶ ಸಂಖ್ಯೆ 1059(3)ರ ವ್ಯಾಪ್ತಿಗೆ ಒಳಪಡುತ್ತಿದ್ದು, ಯಾರಿಗೂ ಮಾಹಿತಿ ನೀಡದಂತೆ ಕಟ್ಟಪ್ಪಣೆ ವಿಧಿಸಲಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಯಾವ ಆಧಾರದಲ್ಲಿ ಹೊರಗೆ?

  • ರೌಡಿಯು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿದ್ದು ನಿಷ್ಕ್ರೀಯವಾಗಿದ್ದರೆ
  • ರೌಡಿಯು ಮೃತಪಟ್ಟರೆ
  • ಸಂಪೂರ್ಣ ಅಂಗವಿಕಲವಾಗಿದ್ದರೆ ಅಥವಾ ಮಾನಸಿಕ ಅಸ್ವಸ್ಥನಾಗಿದ್ದರೆ
  • ಕಳೆದ 10 ವರ್ಷಗಳಲ್ಲಿ ಯಾವುದೇ ಪ್ರಕರಣದಲ್ಲಿ ಭಾಗವಹಿಸದೆ ಸನ್ನಡತೆಯಿಂದ ಇರುವುದು ಕಂಡುಬಂದರೆ (ಯಾವುದೇ ಪ್ರಕರಣ ತನಿಖಾ ಹಂತದಲ್ಲಿ ಅಥವಾ ನ್ಯಾಯಾಲಯದ ವಿಚಾರಣಾ ಹಂತದಲ್ಲಿ ಇರುವುದು ಹೊರತುಪಡಿಸಿ)
  • ಪೊಲೀಸ್ ಮ್ಯಾನುವಲ್ ಕ್ರಮ ಸಂಖ್ಯೆ 1059ರಲ್ಲಿ ನಮೂದಿಸಿದಂತೆ ಇರುವ ಮಾರ್ಗದರ್ಶನಗಳನ್ನು ಅನುಸರಿಸಿ ರೌಡಿ ಹಾಳೆಯನ್ನು ಮುಕ್ತಾಯಗೊಳಿಸಲಾಗುತ್ತಿದೆ.

ಜಿಲ್ಲೆಯಲ್ಲೂ ಬಚಾವ್

ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಐದೂವರೆ ವರ್ಷದಲ್ಲಿ ಒಟ್ಟು 255 ರೌಡಿಶೀಟರ್​ಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. 2018ರಲ್ಲಿ 1, 2019ರಲ್ಲಿ 7, 2020ರಲ್ಲಿ 2, 2021ರಲ್ಲಿ 5, 2022ರಲ್ಲಿ 143, 2023ರಲ್ಲಿ 97 ರೌಡಿಗಳನ್ನು ಪಟ್ಟಿಯಿಂದ ವಿಮುಕ್ತಿಗೊಳಿಸಲಾಗಿದೆ.

ಸನ್ನಡತೆ ಹಿನ್ನೆಲೆಯಲ್ಲಿ ಕೈಬಿಟ್ಟ ಹು-ಧಾ ಮಹಾನಗರ ಪೊಲೀಸ್ ಆಯುಕ್ತಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net