ಮಲೆನಾಡಿಗರಿಗೆ ಆರಣ್ಯ ಕಾಯ್ದೆಗಳಿಂದ ಮುಕ್ತಿ ನೀಡಿ

12jyp3
ಜಯಪುರದ ದುರ್ಗಾ ಪರಮೇಶ್ವರಿ ಸಭಾ ಭವನದಲ್ಲಿ ನಡೆದ ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರು.
Published on

ಜಯಪುರ: ಮಲೆನಾಡಿನ ಭಾಗಗಳ ಮೇಲೆ ಸರ್ಕಾರಗಳು ಹೇರುತ್ತಿರುವ ಜನ ವಿರೋಧಿ ಅರಣ್ಯ ಕಾಯ್ದೆಗಳು, ಸರ್ಕಾರಿ ಜಮೀನಿನಲ್ಲಿ ಅಕ್ರಮ ಕೃಷಿ ಮಾಡಿರುವ ರೈತನಿಗೆ ಮಾತ್ರವಲ್ಲ, ಈ ಭಾಗದಲ್ಲಿ ಸಣ್ಣ ಮನೆ ಮಾಡಿ ಕೂಲಿ ಕೆಲಸ ಮಾಡುತ್ತಿರು ಕಾರ್ಮಿಕನಿಗೂ ಗಂಡಾಂತರ ತರಲಿದೆ ಎಂದು ಮೇಗುಂದಾ ಹೋಬಳಿ ರೈತ ಮತ್ತು ಕಾರ್ಮಿಕ ಸಮಿತಿ ಸದಸ್ಯ ಕೌಳಿ ರಾಮು ಹೇಳಿದರು.
ಜಯಪುರದ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಭಾನುವಾರ ನಡೆದ ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜನವಿರೋಧಿ ಕಸ್ತೂರಿರಂಗನ್ ವರದಿ, ಸೆಕ್ಷನ್ 4, ಜಾರಿಯಿಂದ ಮಲೆನಾಡಿಗರು ಸಂಕಷ್ಟ ಎದುರಿಸುತ್ತಿದ್ದಾರೆ. ಇವುಗಳ ಜಾರಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆ ಇದೆ. ಈ ಕಾಯ್ದೆಗಳು ಜಾರಿಯಾದರೆ ಕೃಷಿಕರು ತಮ್ಮ ಜಮೀನುಗಳಿಂದ, ಬಡವರು ತಮ್ಮ ಮನೆಗಳಿಂದ ಹೊರ ಹಾಕಿ ಕನಿಷ್ಟ ಪರಿಹಾರ ಪಡೆಯಲು ಅರಣ್ಯಾಧಿಕಾರಿಗಳ ಬಳಿ ಅಂಗಲಾಚ ಬೇಕಾದ ದುಸ್ಥಿತಿ ಮಲೆನಾಡಿಗರಿಗೆ ಬರಲಿದೆ. ರಾಜಕೀಯ ಪಕ್ಷಗಳು ಕೆಸರೆರೆಚಾಟ ಬಿಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತಂದು ಕಾಯ್ದೆಗಳಿಂದ ಮುಕ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಾಕೃತಿಕ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಹೋಬಳಿಯ 10 ಗ್ರಾಮಗಳು ಸೇರಿದ್ದು, ಇಎಸ್‌ಎ ನಿಯಮಗಳು ಈ ಭಾಗದಲ್ಲಿ ನೂರಾರು ವರ್ಷಗಳಿಂದ ಪರಂಪರಾಗತವಾಗಿ ಕೃಷಿ ಮಾಡಿಕೊಂಡು ಬಂದಿರುವ ಜನರಿಗೆ, ಮನೆ ನಿರ್ಮಿಸಿಕೊಂಡಿರುವವರಿಗೆ ಸಮಸ್ಯೆಯಾಗಲಿದೆ. ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವ ಜನಸಾಮಾನ್ಯರ ಹಿತವನ್ನು ಸರ್ಕಾರಗಳು ಕಾಪಾಡಬೇಕು ಎಂದರು.
ಸದಸ್ಯ ಮಣಿಕಂಠನ್ ಕಂದಸ್ವಾಮಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಭೂ ಕುಸಿತಕ್ಕೆ ಸರ್ಕಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವುದು ಕಾರಣ. ಆದ್ದರಿಂದ ಒತ್ತುವರಿ ತೆರವು ಮಾಡಬೇಕು ಎಂದು ಅರಣ್ಯ ಸಚಿವ ಈಶ್ವರಖಂಡ್ರೆ ಅವರು ಹೊರಡಿಸಿರುವ ಒತ್ತುವರಿ ತೆರವಿನ ಆದೇಶ ಜನವಿರೋಧಿಯಾಗಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಾಕೃತಿಕ ಸೂಕ್ಷ್ಮಪ್ರದೇಶದ ಪಟ್ಟಿಗೆ ಹೊಬಳಿ ಗ್ರಾಮಗಳನ್ನು ಸೇರಿಸಿರುವುದನ್ನು ಪಕ್ಷಾತೀತವಾಗಿ ವಿರೋಧಿಸುತ್ತೇವೆ ಎಂದರು.
ಸಮಿತಿ ಅಧ್ಯಕ್ಷ ಅತ್ತಿಕುಳಿ ಸುಂದರೇಶ್, ಸದಸ್ಯರಾದ ಕೀರ್ತಿರಾಜ್, ಹಾಗಲಗಂಚಿ ವೆಂಕಟೇಶ್, ಸುಭಾಶ್ ಕೊಬಡೆ, ಡಿ.ಎಸ್.ಸತೀಶ್, ಎಚ್ ಎಮ್.ಸತೀಶ್, ಅರನೂರು ಸಂತೋಷ್, ಮಂಜುನಾಥ ಕ್ಯಾತನಮಕ್ಕಿ, ಕ್ಷೇತ್ರ ಹೋರಾಟ ಸಮಿತಿ ಅದ್ಯಕ್ಷ ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net