

ಬೆಂಗಳೂರು: ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ( ಎಂಎಸ್ಎಂಇ) ಕನಿಷ್ಠ ವೇತನ ನೀತಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕಾಗಳ ಸಂಘ( ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಒತ್ತಾಯಿಸಿದ್ದಾರೆ.
ಎಂ.ಜಿ.ರಾಜಗೋಪಾಲ್ ನೇತೃತ್ವದ ನಿಯೋಗ, ಸೋಮವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಬ್ಯಾಂಕಿಂಗ್, ಹಣಕಾಸು ಹಾಗೂ ಕಾರ್ಮಿಕ ವಿಷಯ ಸೇರಿ ಎಂಎಸ್ಎಂಇ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ದೇಶದ ಎಲ್ಲ ರಾಜ್ಯಗಳಲ್ಲೂ ಕನಿಷ್ಠ ವೇತನ ನೀತಿ ಇದೆ. ಇದು ಸೂಕ್ಷ್ಮ, ಸಣ್ಣ, ಮಧ್ಯಮ,ಬೃಹತ್ ಹಾಗೂ ಐಟಿ ಕಂಪನಿಗಳಿಗೆ ಅನ್ವಯವಾಗುತ್ತದೆ. ಬೃಹತ್ ಕೈಗಾರಿಕೆಗಳು,ಐಟಿ ಕಂಪನಿಗಳು ಅರ್ಹತೆ ಮತ್ತು ಕೌಶಲ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಆದರೆ ಎಂಎಸ್ಎಂಇಗಳು ಶಾಲೆ ಬಿಟ್ಟ, ಅನರಸ್ಥರು, ಕೌಶಲ ಹೊಂದಿಲ್ಲದ ನಿರುದ್ಯೋಗಿಳಿಗೆ ಕೆಲಸ ಕೊಟ್ಟು ಸೂಕ್ತ ತರಬೇತಿಗೆ ಅವಕಾಶ ನೀಡಲಾಗುತ್ತಿದೆ. 50ಗಿಂತ ಕಡಿಮೆ ಉದ್ಯೋಗಿ ಹೊಂದಿರುವ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಬೇಕೆಂದು ಸಚಿವರ ಬಳಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಎಂಎಸ್ಎಂಇಗಳನ್ನು ಆದ್ಯತೆ ಸಾಲಕ್ಕಾಗಿ ಪರಿಗಣಿಸಲಾಗಿದ್ದರೂ ಬ್ಯಾಂಕ್ಗಳು ವಿಧಿಸುತ್ತಿರುವ ಬಡ್ಡಿ ದರ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ನೀಡುವ ಸಾಲದ ಬಡ್ಡಿ ದರಗಿಂತ ಜಾಸ್ತಿ ಇದೆ. ಇದನ್ನು ಕಡಿಮೆ ಮಾಡಬೇಕು. ಪ್ರಸ್ತುತ ಎನ್ಪಿಎ ಮಾಡದಂಡವು 90 ದಿನಗಳಾಗಿದ್ದು, ಇದನ್ನು 180 ದಿನಗಳಿಗೆ ಹೆಚ್ಚಿಸಬೇಕು.ನಷ್ಟದ ಭಯದಿಂದ ಬ್ಯಾಂಕ್ಗಳು ಸಾಲ ನೀಡಲು ಹಿಂಜರಿಯುತ್ತಿವೆ. ಎಂಎಸ್ಎಂಇ ಸಚಿವಾಲಯ ನೀಡುವ ಉದ್ಯಮ ಪ್ರಮಾಣಪತ್ರ ಪ್ರಕ್ರಿಯೆಯಲ್ಲಿ ಇರುವ ಗೊಂದಲ ನಿವಾರಿಸಬೇಕು ಎಂದು ಕಾಸಿಯಾ ಅಧ್ಯಕ್ಷರು ಮನವಿ ಮಾಡಿದ್ದಾರೆ.