ವಶೀಲಿಬಾಜಿಗಳಿಲ್ಲದೆ ಅರಸಿ ಬರಬೇಕು ಪ್ರಶಸ್ತಿ : ಪತ್ರಕರ್ತ ಜೋಗಿ ಹೇಳಿಕೆ

excel-1
ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಅಕ್ಷರ ಗೌರವ ಪುರಸ್ಕಾರ ಪ್ರದಾನಿಸಲಾಯಿತು. ಪತ್ರಕರ್ತ ಜೋಗಿ, ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನಮ್ಮ ಸಾಧನೆ ಬಗ್ಗೆ ಅಜ್ಞಾತ ಮೂಲದಿಂದ ಅರಿವಾಗುವವರಿಗೆ ಅರಿವಾಗಿ ಯಾವುದೇ ವಶೀಲಿಬಾಜಿಗಳಿಲ್ಲದೆ ಪ್ರಶಸ್ತಿಗಳು ನಮ್ಮನ್ನು ಅರಸಿ ಬರಬೇಕು. ಆಗ ಮಾತ್ರ ನಮ್ಮ ಸಾಧನೆಯ ಪರಿಣಾಮ ಇನ್ನೊಬ್ಬರಿಗೆ ತಟ್ಟಿದೆ ಎಂದು ನಾವು ಅರ್ಥೈಸಿಕೊಳ್ಳಬಹುದು ಎಂದು ಪತ್ರಕರ್ತ, ಲೇಖಕ ಜೋಗಿ ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ 2024ನೇ ಸಾಲಿನ ಎಕ್ಸೆಲ್ ಅಕ್ಷರ ಗೌರವ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಿಂದ ಪುರಸ್ಕಾರ ಪಡೆದಿರುವ ಈ ಸಾಧಕರನ್ನು ಅಕ್ಷರೋತ್ಸವ ವೇದಿಕೆಯಲ್ಲಿ ಸನ್ಮಾನಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದ್ದೇವೆ. ಇವರ ಸಾಧನೆ ಕಂಡು ಒಬ್ಬ ವಿದ್ಯಾರ್ಥಿ ದೃಢತೆ ಪಡೆದರೂ ಅದು ಈ ಕಾರ್ಯಕ್ರಮದ ಯಶಸ್ಸು ಎಂದರು.

ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ವಿಜ್ಞಾನಿ ಅಭಿರಾಮ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಶಿಕ್ಷಕ ಧರಣೇಂದ್ರ ಕೆ.ಜೈನ್ ನಿರೂಪಿಸಿ, ಉಪನ್ಯಾಸಕಿ ಅಂಜನಿ ಎಂ.ರಾವ್ ವಂದಿಸಿದರು.

ಯಾರಿಗೆಲ್ಲ ಪುರಸ್ಕಾರ?

2024ನೇ ಸಾಲಿನ ಅಕ್ಷರ ಪುರಸ್ಕಾರವನ್ನು ಅಮೈ ಬಿ.ಕೆ.ದೇವರಾವ್, ಸಾಹಿತ್ಯಕ್ಕಾಗಿ ಖ್ಯಾತ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಬಿ.ಜನಾರ್ದನ ಭಟ್, ಸಂಶೋಧನಾ ಪ್ರವೃತ್ತಿಗಾಗಿ ವಿಶ್ರಾಂತ ಪ್ರಾಧ್ಯಾಪಕ, ಇತಿಹಾಸ ತಜ್ಞ ಡಾ.ಉಮಾನಾಥ ಶೆಣೈ, ನಾಟಕದ ಹಿರಿಮೆಗಾಗಿ ಖ್ಯಾತ ನಾಟಕ ನಿರ್ದೇಶಕ ಗುರುರಾಜ ಮಾರ್ಪಳ್ಳಿ, ಯಕ್ಷಗಾನ ದಿಗ್ಗಜ ಅರುವ ಕೊರಗಪ್ಪ ಶೆಟ್ಟಿ, ದೈವ ನರ್ತನ ಪ್ರವೀಣ ಲೋಕಯ್ಯ ಸೇರ ಮತ್ತು ಪುಸ್ತಕ ಪ್ರಕಾಶಕ ಅಂಕಿತ ಪ್ರಕಾಶನ ಬೆಂಗಳೂರು ಇದರ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಗೆ ಅಧ್ಯಯನಶೀಲತೆ ಬಹಳ ಮುಖ್ಯ. ವಿದ್ಯಾರ್ಥಿ ಜೀವನ ಎಂದರೆ ಸುಖ ಪಡೆಯುವ ಸಮಯವಲ್ಲ. ಪಿಯುಸಿಯಲ್ಲಿ ಎರಡು ವರ್ಷ ಕಷ್ಟಪಟ್ಟರೆ ಜೀವನಪೂರ್ತಿ ಸುಖ ಪಡೆಯಬಹುದು. ನಮ್ಮ ಪ್ರತಿಭೆಗಳನ್ನು ಸಾಕಾರಗೊಳಿಸಲು ಆ ಬಳಿಕವೂ ಅವಕಾಶವಿದೆ. ಆದ್ದರಿಂದ ಕಲಿಕಾ ಅವಧಿಯಲ್ಲಿ ಇತರ ಎಲ್ಲ ಚಿಂತನೆಗಳನ್ನು ಬಿಟ್ಟುಬಿಡಬೇಕು.- ಜೋಗಿಪತ್ರಕರ್ತ ಹಾಗೂ ಲೇಖಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net