

ಶಾಸಕಾಂಗ ಮಾಡಿರುವ ಶಾಸನಗಳನ್ನು ವಿಧಿವತ್ತಾಗಿ ಕಾರ್ಯಾಂಗ ಅನುಷ್ಠಾನ ಮಾಡದ ಪರಿಣಾಮ ನ್ಯಾಯಾಲಯಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದು ಕರ್ನಾಟಕ ಉಚ್ಛ ನ್ಯಾಯಲಯದ ನ್ಯಾಯಮೂರ್ತಿ ಗುರುಸಿದ್ಧಯ್ಯ ಬಸವರಾಜು ಹೇಳಿದರು.
ಪುಷ್ಕರ ಪ್ರಕಾಶನ ವತಿಯಿಂದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸುರೇಶ್ ಕರ್ತಾಳ್ ಸಾರಥ್ಯದ ‘ಲಾ ಫಾರ್ ಆಲ್’ ಕನ್ನಡ ಕಾನೂನು ಮಾಸ ಪತ್ರಿಕೆಯ ಉದ್ಘಾಟನೆ ಹಾಗೂ ಪತ್ರಿಕಾ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲಿ ಅನೇಕರ ಹೋರಾಟದ ಫಲವಾಗಿ ದೇಶಕ್ಕೆ ಸ್ವತಂತ್ರ ಸಿಕ್ಕಿದೆ. ಸ್ವತಂತ್ರದ ನಂತರ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಸಂವಿಧಾನದ ಅಡಿ ಒಟ್ಟಿಗೆ ದೇಶವನ್ನು ಮುನ್ನಡೆಸುತ್ತಿವೆ. ಸಂವಿಧಾನ ಜಾರಿಯ ಬಳಿಕವೂ ಅನೇಕ ಕಾನೂನುಗಳನ್ನು ಶಾಸಕಾಂಗದವರು ತಂದಿದ್ದಾರೆ. ದೇಶದಲ್ಲಿ ಬಹಳ ಒಳ್ಳೆಯ ಕಾನೂನುಗಳಿವೆ. ಆದರೆ, ಕಾರ್ಯಾಂಗದವರು ಆ ಶಾಸನಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿ ವಿಫಲರಾದ್ದಾರೆ. ಹಾಗಾಗಿ, ನ್ಯಾಯಾಂಗ ಪ್ರವೇಶ ಮಾಡಬೇಕಾಗಿದೆ ಎಂದರು.
ಸಾರ್ವಜನಿಕರಿಗೆ ಕಾನೂನಿನ ಮಾಹಿತಿಯನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಲಾ ಫಾರ್ ಆಲಗ್ ಪತ್ರಿಕೆ ಹೊರ ತರುತ್ತಿರುವುದು ಶ್ಲಾಘನಿಯ. ಇದನ್ನು ಎಲ್ಲರೂ ಬೆಂಬಲಿಸಬೇಕಾಗಿದೆ ಎಂದರು.
ಇದೇ ವೇಳೆ ಕರ್ನಾಟಕ ಉಚ್ಛ ನ್ಯಾಯಲಯದ ನ್ಯಾಯಮೂರ್ತಿಗಳಾದ ಗುರುಸಿದ್ಧಯ್ಯ ಬಸವರಾಜು ಹಾಗೂ ಟಿ.ಜಿ.ಶಿವಶಂಕರೇಗೌಡ ‘ಲಾ ಫಾರ್ ಆಲ್’ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ವಕೀಲರ ಪರಿಷತ್‌ನ ಮಾಜಿ ಅಧ್ಯಕ್ಷ ಜಯಕುಮಾರ್ ಎಸ್.ಪಾಟೀಲ್, 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪುಟ್ಟಸ್ವಾಮಿ, ಹಿರಿಯ ವಕೀಲರಾದ ಸಿ.ಎಂ.ಜಗದೀಶ್, ಕೆ.ಆರ್.ಶಿವಶಂಕರ್, ಲಾ ಫಾರ್ ಆಲ್ ಕಾನೂನು ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಕೆ.ಬಿ.ಸುರೇಶ್ ಇತರರಿದ್ದರು.