ನಿಂದನೆಗೆ ಕ್ಷಮೆ ಯಾಚಿಸಿದ ಎಸ್ಟೇಟ್ ವ್ಯವಸ್ಥಾಪಕ

Published on

 ಠಾಣೆಯಲ್ಲಿ ಬಾಕಿ ಹಣ ವಾಪಸ್ 

ಆಲೂರು : ಕಾರು ಬಾಡಿಗೆ ಪಡೆದಿದ್ದ ತಮಿಳುನಾಡು ಮೂಲದ ಕಾಫಿ ಎಸ್ಟೇಟ್ ವ್ಯವಸ್ಥಾಪಕನೊಬ್ಬ ಕಾರು ಮಾಲೀಕ

ಮತ್ತು ಕನ್ನಡಿಗರ ಕುರಿತು ಹಗುರವಾಗಿ ಮಾತನಾಡಿದ ಪ್ರಕರಣಕ್ಕೆ ಠಾಣೆಯಲ್ಲಿ ಕ್ಷಮೆ ಕೋರಿದ್ದಾರೆ.

ತಮಿಳುನಾಡಿನ ಅರುಣ್ ಎಂಬಾತ ಕಂದಲಿ ಗ್ರಾಮದ ಸ್ವಾಮಿಗೌಡ ಎಂಬುವರಿಗೆ ಸೇರಿದ ಕಾರನ್ನು 2 ವರ್ಷದ ಅವಧಿಗೆ ಬಾಡಿಗೆ ಪಡೆದಿದ್ದ. ಚಾಲಕ ಶೇಖರ್ ಎಂಬಾತ ನಿತ್ಯವೂ ಅರುಣ್‌ರನ್ನು ಹಾಸನದಿಂದ ಕಾಫಿ ಎಸ್ಟೇಟ್ ಒಂದಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದರು. ಒಟ್ಟು 70 ಸಾವಿರ ರೂ. ಹಣವನ್ನು ಕಾರು ಮಾಲೀಕರಿಗೆ ಅರುಣ್ ಕೊಡಬೇಕಿತ್ತು. ಆದರೆ 12 ಸಾವಿರ ರೂ. ಮಾತ್ರ ಕೊಟ್ಟು ಉಳಿದ ಹಣ ಕೊಡಲು ಸತಾಯಿಸುತ್ತಿದ್ದ. ಹಣ ಕೊಡುವಂತೆ ಕಾರು ಮಾಲೀಕ ಸ್ವಾಮಿಗೌಡ ಮತ್ತು ಚಾಲಕ ಶೇಖರ್ ಕೇಳಿದ್ದಕ್ಕೆ ಕನ್ನಡಿಗರ ಬಗ್ಗೆಯೇ ಕೀಳಾಗಿ ಮಾತನಾಡಿದ್ದ.

ಈ ವಿಷಯ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ದಿನೇಶ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗಲೂ ಅರುಣ್ ದುರ್ವರ್ತನೆ ತೋರಿದ್ದ. ಇದರಿಂದ ಆಕ್ರೊಶಗೊಂಡ ಹೋರಾಟಗಾರ ದಿನೇಶ್, ಆಲೂರು ಠಾಣೆ ಮೆಟ್ಟಿಲೇರಿದ್ದರು. ಅಲ್ಲಿಗೆ ಬಂದ ಅರುಣ್, ನನ್ನಿಂದ ತಪ್ಪಾಗಿದೆ. ಕನ್ನಡ ಭಾಷೆ ಕುರಿತು ಮಾತನಾಡಿದ್ದಕ್ಕೆ ಕ್ಷಮೆ ಕೋರುವೆ ಎಂದು ಹೇಳಿ ಉಳಿದ ಹಣವನ್ನು ಕಾರು ಮಾಲೀಕರಿಗೆ ನೀಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಕೆಲಸ ಬಿಟ್ಟು ಸ್ವಂತ ಊರಿಗೆ ತೆರಳುವೆ ಎಂದೂ ಹೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net