

ನಾಗಮಂಗಲ : ರಾಷ್ಟ್ರಮಟ್ಟ ಗಮನ ಸೆಳೆದಿದ್ದ ಸೆ.11ರ ಗಣೇಶಮೂರ್ತಿ ವಿಸರ್ಜನಾ ಗಲಭೆ ಪ್ರಕರಣ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದರ ಬಳಿಕ ಶುಕ್ರವಾರ ಪಟ್ಟಣದಲ್ಲಿ ನಡೆದ ಇತಿಹಾಸ ಪ್ರಸಿದ್ಧ ಕೋಟೆ ಗಣಪತಿಮೂರ್ತಿಯ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಸಾವಿರಾರು ಆಸ್ತಿಕರು ಸಾಕ್ಷಿಯಾದರು.
1951 ರಿಂದ ಪ್ರಾರಂಭವಾದ ಪಟ್ಟಣದ ಕೋಟೆಗಣಪತಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವ ಈ ಹಿಂದೆ ನಾಡಿನಾದ್ಯಂತ ಹೆಸರುವಾಸಿಯಾಗಿತ್ತು. ನಂತರದ ಕಾಲಘಟ್ಟದಲ್ಲಿ ಕಳೆಗುಂದಿದ್ದ ಮೆರವಣಿಗೆಯ ಸೊಬಗು 72ನೇ ವಿಸರ್ಜನಾ ಮಹೋತ್ಸವ ಮೆರವಣಿಗೆಯಲ್ಲಿ ಹಿಂದಿನ ಸೊಬಗನ್ನು ನೆನಪಿಸುವಂತೆ ಮರುಕಳುಹಿಸುವ ಮೂಲಕ ಪಟ್ಟಣದ ನಾಗರಿಕರಲ್ಲಿ ಧನ್ಯತಾಭಾವನೆ ಮೂಡಿಸಿತ್ತು.
ಮೆರವಣಿಗೆಗೆ ಚಾಲನೆ ನೀಡಿದ ಚುಂಚಶ್ರೀ:
ಇತಿಹಾಸ ಪ್ರಸಿದ್ಧ ಕೋಟೆಗಣಪತಿ ವಿಸರ್ಜನಾ ಮೆರವಣಿಗೆಗೆ ಶುಕ್ರವಾರ ಬೆಳಗ್ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಶ್ರೀಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕ ಸುರೇಶ್‌ಗೌಡ ಪೂಜೆಯಲ್ಲಿ ಭಾಗಿಯಾಗಿದ್ದರು. ಶ್ರೀಗಳು ಪೂಜೆ ಸಲ್ಲಿಸಿದ ನಂತರ ಗಣೇಶ ಮೂರ್ತಿಯನ್ನು ದೇವಸ್ಥಾನದಿಂದ ಅಲಂಕೃತಗೊಂಡ ವಾಹನಕ್ಕಿರಿಸಿ ಪಟ್ಟಣದಾದ್ಯಂತ ವಿವಿಧ ಕಲಾತಂಡಗಳ ಕಲಾಪ್ರದರ್ಶನದೊಂದಿಗೆ ಬೆಳಗ್ಗೆಯಿಂದ ರಾತ್ರಿವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗಣಪತಿ ಮೂರ್ತಿ ಸಾಗಿತು.
ಪೊಲೀಸರು ಹಿಂದು ಕಾರ್ಯಕರ್ತರ ನಡುವೆ ವಾಗ್ವಾದ:
ಗಣೇಶ ಮೂರ್ತಿಯ ಮೆರವಣಿಗೆ ಪಟ್ಟಣದ ಎಸ್‌ಬಿಐ ಬ್ಯಾಂಕ್ ಎದುರು ಸಾಗುತ್ತಿದ್ದ ಸಂದರ್ಭದಲ್ಲಿ ಹಿಂದುಪರ ಹೋರಾಟಗಾರ ಪುನೀತ್‌ಕೆರೆಹಳ್ಳಿ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಪಾಲ್ಗೊಂಡ ಸುಮಾರು 20 ನಿಮಿಷಗಳ ನಂತರ ಪುನೀತ್‌ಕೆರೆಹಳ್ಳಿಯನ್ನು ಪೊಲೀಸರು ಕಾರು ಹತ್ತಿಸಿ ಕಳುಹಿಸಲು ಮುಂದಾದ ಸಂದರ್ಭ ಹಿಂದುಪರ ಕಾರ್ಯಕರ್ತರು ಅದಕ್ಕೆ ವಿರೋಧ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಈ ಸಂದರ್ಭ ಕೆಲಕಾಲ ಭಜರಂಗದಳದ ಮುಖಂಡರು ಹಾಗೂ ಎಸ್ಪಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಪುನೀತ್‌ಕೆರೆಹಳ್ಳಿ ಅವರು ಹೋಗುತ್ತೇನೆ ಎಂದಿದ್ದಕ್ಕೆ ನಾವು ಕಳುಹಿಸಲು ಮುಂದಾಗಿದ್ದೆವು. ಅವರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾದರೆ ನಮ್ಮದೇನು ತಕರಾರಿಲ್ಲ ಎಂದು ಎಸ್ಪಿ ಸಮಜಾಯಿಸಿ ನೀಡಿದರು. ಪೊಲೀಸರೇ ಉದ್ದೇಶಪೂರ್ವಕವಾಗಿ ಪುನೀತ್‌ಕೆರೆಹಳ್ಳಿ ಅವರನ್ನು ಪಟ್ಟಣದಿಂದ ಕಳುಹಿಸುವ ಹುನ್ನಾರ ಮಾಡುತ್ತಿದ್ದಾರೆಂದು ಹಿಂದು ಮುಖಂಡರು ಆರೋಪಿಸಿದರು. ನಂತರ ಮೆರವಣಿಗೆಯಲ್ಲಿ ಪುನೀತ್‌ಕೆರೆಯಲ್ಲಿ ಸಂಜೆ 5 ಗಂಟೆಯವರೆಗೂ ಪಾಲ್ಗೊಂಡರು.
ಬಂದ್ ಆಗಿದ್ದ ಮಸೀದಿ:
ಬದ್ರಿಕೊಪ್ಪಲು ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಮಸೀದಿ ಬಳಿ ನಡೆದಿದ್ದ ಗಲಭೆಯಿಂದ ಪಟ್ಟಣದ ಮೈಸೂರು ರಸ್ತೆಯ ಮಸೀದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು ಮಾತ್ರವಲ್ಲದೆ, ರಸ್ತೆಗೆ ಮಸೀದಿ ಕಾಣದಂತೆ ಪೊಲೀಸ್ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಬೆಳಗ್ಗೆಯಿಂದ ಮಸೀದಿಗೆ ಯಾರೂ ಕೂಡ ಹೋಗಿ ಪ್ರಾರ್ಥನೆ ಮಾಡದಂತೆ ಮಸೀದಿ ಸಂಪೂರ್ಣ ಬಂದ್ ಆಗಿತ್ತು.
ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು:
ಗಣೇಶ ಮೂರ್ತಿಯ ಮೆರವಣಿಗೆಯು ಪಟ್ಟಣದ ಬೀದರ್-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಶಾಲಾ-ಕಾಲೇಜುಗಳ ನೂರಾರು ಸಂಖ್ಯೆಯ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಡಿಜೆ ಹಾಗೂ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿ ಭರ್ಜರಿಯಾಗಿ ಸ್ಟೆಪ್ ಹಾಕಿದರು. ಜೈ ಶ್ರೀರಾಮ್ ಘೋಷಣೆ ಕೂಗಿ, ಕೇಸರಿ ಶಾಲುಗಳನ್ನು ಬೀಸುವ ಮೂಲಕ ಸ್ಟೆಪ್ ಹಾಕುತ್ತಿದ್ದು ಇಡೀ ಮೆರವಣಿಗೆಗೆ ಮೆರುಗು ನೀಡಿತು. ಹಿಂದೂ ಯುವಕರು ಕೂಡ ಮೆರವಣಿಗೆಯುದ್ದಕ್ಕೂ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಹಿಂದೂ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ವಿವಿಧ ಕಲಾತಂಡಗಳ ಕಲರವ:
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡು ವೈವಿದ್ಯಮಯ ಕಲಾಪ್ರದರ್ಶನ ನಡೆಸಿದ್ದು ಇಡೀ ದಿನದ ಮೆರವಣಿಗೆಗೆ ವಿಶೇಷ ಮೆರಗು ನೀಡಿದವು. ತಮಟೆ, ವೀರಗಾಸೆ, ಮಂಗಳವಾದ್ಯ, ಪೂರ್ಣಕುಂಭ, ಪಟದ ಕುಣಿತ, ಪೂಜಾ ಕುಣಿತ, ಡೊಳ್ಳುಕುಣಿತ ಸೇರಿದಂತೆ ಮುಂತಾದ ಕಲಾತಂಡಗಳು ಪಾಲ್ಗೊಂಡಿದ್ದವು.
ಇತಿಹಾಸ ನಿರ್ಮಿಸಿದ ಮೆರವಣಿಗೆ:
ಕಳೆದ ಸೆ.11 ರಂದು ಪಟ್ಟಣದಲ್ಲಿ ಬದ್ರಿಕೊಪ್ಪಲು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭ ನಡೆದ ಗಲಭೆಯಿಂದ ಪಟ್ಟಣದಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣದಿಂದ ಪಟ್ಟಣ ಮಾತ್ರವಲ್ಲದೆ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡು ಹಿಂದೂಪರ ಘೋಷಣೆ ಕೂಗಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ದೇವಾಲಯಗಳ ನಾಡು ಎಂಬುದನ್ನು ಸಾಕ್ಷೀಕರಿಸಿ ಇತಿಹಾಸ ನಿರ್ಮಿಸುವಂತಿತ್ತು.
ಹಂಪೆ ಅರಸನ ಕೊಳದಲ್ಲಿ ವಿಸರ್ಜನೆ:
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ಪುರಾಣಿತಿಹಾಸ ಪ್ರಸಿದ್ಧ ಹಂಪೆ ಅರಸನ ಕೊಳದಲ್ಲಿ ನಡೆಸಲಾದ ತೆಪ್ಪೋತ್ಸವದ ನಂತರ ಸಾಂಪ್ರಾಯಿಕ ವಿಧಿವಿಧಾನಗಳೊಂದಿಗೆ ಪೂಜಾಕೈಕಂರ್ಯ ನೆರವೇರಿಸಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಮೆರವಣಿಗೆ ಮೇಲೆ ಪೊಲೀಸ್ ಹದ್ದಿನಕಣ್ಣು:
ಗಣಪತಿ ವಿಸರ್ಜನ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 5 ಕೆಎಸ್‌ಆರ್‌ಪಿ ತುಕಡಿ, 10 ಜಿಲ್ಲಾ ಶಸಸ್ತ್ರ ಮೀಸಲು ಪಡೆ, 1 ಎಎಸ್ಪಿ, 6 ಡಿವೈಎಸ್ಪಿ, 16 ಸಿಪಿಐ, 35 ಪಿಎಸ್ಸೈ, 600 ಜನ ಸಿಬ್ಬಂದಿ, 15 ಬೈಕ್ ಪ್ಯಾಟ್ರೋಲ್, 02 ಡ್ರೋನ್ ಕ್ಯಾಮರಾ, 25 ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಮೆರವಣಿಗೆಯ ಮೇಲೆ ಹದ್ದಿನಕಣ್ಣಿಡಲಾಯಿತು.
ಸ್ವಯಂ ಪ್ರೇರಿತ ಬಂದ್:
ಗಣೇಶ ವಿಸರ್ಜನೆಯ ಮೆರವಣಿಗೆಗೆ ಸಾಥ್ ನೀಡುವ ಸಲುವಾಗಿ ಪಟ್ಟಣದಾದ್ಯಂತ ಅಂಗಡಿ ಮುಂಗಟ್ಟುಗಳು ಶುಕ್ರವಾರ ಬೆಳಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿ ಸಹಕರಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಡಾ.ಕುಮಾರ್ ಅವರ ಆದೇಶದಂತೆ ಶುಕ್ರವಾರದ ಸಂತೆ, ಎಲ್ಲಾ ವಿಧದ ಮದ್ಯದಂಗಡಿಗಳ ವಹಿವಾಟಿಗೆ ನಿಷೇಧಿಸಲಾಗಿತ್ತು.