

ತುಮಕೂರು: ವಿವಿ ಸ್ನಾತಕ ಪದವಿಗಳ ಪ್ರಥಮ ಸೆಮಿಸ್ಟರ್ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಗ್ರಹಣ ಬಡಿದಿದೆ.
ವಿವಿ ಪರೀಕ್ಷಾಂಗ ವಿಭಾಗ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿದ್ದು, ಸಮಸ್ಯೆ ತಂದೊಡ್ಡಿದೆ.
ಅತಿಥಿ ಉಪನ್ಯಾಸಕರು ಕಾಲೇಜಿಗೆ ಗೈರಾಗಿ ವಿವಿ ಮೌಲ್ಯಮಾಪನದಲ್ಲಿ ತೊಡಗಿದರೆ ಅಂತಹ ಉಪನ್ಯಾಸಕರ ವೇತನ ಕಡಿತ ಮಾಡುವುದಾಗಿ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿರುವುದು ಹೊಸ ಸಮಸ್ಯೆ ತಂದೊಡ್ಡಿದೆ.
ಜತೆಗೆ ವಿವಿ ಈ ಸೆಮಿಸ್ಟರ್‌ನಿಂದ ಮೌಲ್ಯಮಾಪನ ಪ್ರತಿಗಳನ್ನು ಒಂದು ದಿನಕ್ಕೆ 30 ಪ್ರತಿಗಳ ಬದಲಾಗಿ 45ಕ್ಕೆ ಹೆಚ್ಚಿಸಿದ್ದು, ಒಂದು ಪ್ರತಿಗೆ 15ರೂ. ನಿಂದ 9ರೂ.ಗೆ ಕಡಿತ ಮಾಡಲಾಗಿದೆ ಎಂದು ಅತಿಥಿ ಉಪನ್ಯಾಸಕರು ಜು.25ರಿಂದ ಆರಂಭವಾಗಿರುವ ಮೌಲ್ಯಮಾಪನದಿಂದ ದೂರ ಉಳಿದಿದ್ದಾರೆ.
ಮಂಗಳವಾರದಿಂದ ರಾಜ್ಯಶಾಸ್ತ್ರ, ವಾಣಿಜ್ಯಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ, ಬುಧವಾರದಿಂದ ಅರ್ಥಶಾಸ್ತ್ರ, ಗುರುವಾರದಿಂದ ಇತಿಹಾಸ ಹಾಗೂ ಸಮಾಜಶಾಸ್ತ್ರ ಸೇರಿದಂತೆ ಎಲ್ಲ ವಿಷಯಗಳ ಮೌಲ್ಯಮಾಪನ ಈ ವಾರದಲ್ಲಿ ಆರಂಭವಾಗಲಿದ್ದು ಹಾಜರಾಗುವಂತೆ ವಿವಿ ಪರೀಕ್ಷಾಂಗ ವಿಭಾಗ ಸುತ್ತೋಲೆ ಹೊರಡಿಸಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಮೌಲ್ಯಮಾಪನದಿಂದ ದೂರ ಉಳಿದಿರುವ ಹಿನ್ನೆಲೆಯಲ್ಲಿ ಕಾಯಂ ಪ್ರಾಧ್ಯಾಪಕರು ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರಿಂದ ಮೌಲ್ಯಮಾಪನ ಮುಂದುವರಿಸಲಾಗುತ್ತಿದೆ. ಮೌಲ್ಯಮಾಪನ ಗುಣಮಟ್ಟದ ಬಗ್ಗೆ ವಿದ್ಯಾರ್ಥಿಗಳಿಗೆ ಆತಂಕ ಮೂಡಿದೆ.
ವಿಶ್ವವಿದ್ಯಾಲಯದ ಅಧಿಕಾರಿಗಳು ಮನಸ್ಸಿಗೆ ಬಂದಂತೆ ನಿಯಮ ರೂಪಿಸಿ, ಅತಿಥಿ ಉಪನ್ಯಾಸಕರಿಗೆ ಹೊರೆಯಾಗುವಂತೆ ಮೌಲ್ಯಮಾಪನಕ್ಕೆ ಆಹ್ವಾನಿಸಿದ್ದಾರೆ. ತಾರತಮ್ಯ ನಿವಾರಿಸಿ ಗೌರವಯುತ ವೇತನ ನೀಡಿದರಷ್ಟೇ ಹಾಜರಾಗಲು ನಿರ್ಧರಿಸಿದ್ದೇವೆ.
-ಹೆಸರು ಹೇಳಲು ಇಚ್ಛಿಸದ ಅತಿಥಿ ಉಪನ್ಯಾಸಕ, ಸರ್ಕಾರಿ ಪದವಿ ಕಾಲೇಜು
ವೇತನ ಸಹಿತ ಮೌಲ್ಯಮಾಪನಕ್ಕೆ ಅವಕಾಶ ನೀಡದ ಸರ್ಕಾರದ ಹೊಸ ಆದೇಶ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗಿದ್ದು, ಮೌಲ್ಯಮಾಪನಕ್ಕೆ ಹಾಜರಾಗದೇ ಇರಬಹುದು. ವಿವಿ ವತಿಯಿಂದ ಯಾವುದೇ ಮೌಲ್ಯವನ್ನು ಕಡಿಮೆ ಮಾಡಿಲ್ಲ. ಮೌಲ್ಯಮಾಪನ ಮುಂದುವರಿದಿದೆ.
-ಪ್ರೊ.ನಿರ್ಮಲ್‌ಕುಮಾರ್
ಕುಲಸಚಿವ(ಮೌಲ್ಯಮಾಪನ)