ರೋಚಕ ಕಾರ್ಯಾಚರಣೆ, ನದಿ ನೀರಿನ ಹರಿವಿನಲ್ಲಿ ಸಿಲುಕಿಕೊಂಡಿದ್ದ ಚಾಲಕನ ರಕ್ಷಣೆ

IMG_20251024_232624.jpg
Published on

ಚಿಕ್ಕಬಳ್ಳಾಪುರ: ಕುಶಾವತಿ ನದಿಯ ನೀರು ಚಿಂತಾಮಣಿ-ಚೇಳೂರು ಮುಖ್ಯ ರಸ್ತೆಯ ಹೊಸಹಡ್ಯ ಸಮೀಪದ ರಸ್ತೆಯಲ್ಲಿ ರಭಸವಾಗಿ ಹರಿಯುತ್ತಿದೆ.  ಇದರಲ್ಲಿ ಕ್ಯಾಂಟರ್‌ವೊಂದು ಸಿಲುಕಿಕೊಂಡು ಒದ್ದಾದುಡುತ್ತಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ನೀರಿನಲ್ಲಿ ಸಿಲುಕಿ ಬಳಿಕ ಅದೃಷ್ಟವಶಾತ್ ಉಳಿದುಕೊಂಡ ಚಾಲಕ ಚೇಳೂರು ತಾಲೂಕಿನ ಪೆದ್ದೂರು ಗುಂಡ್ಲಹಳ್ಳಿಯ  ವಿಜಯ್. ರಭಸವಾಗಿ ಹರಿಯುತ್ತಿರುವ ಕುಶಾವತಿಯ ನೀರಿನ ನಡುವೆ ಬೃಹತ್ ನಾಲ್ಕು ವಾಹನಗಳು ಸಂಚರಿಸುತ್ತಿವೆ. ಇದೇ ವೇಳೆ ರಾತ್ರಿ ಹೊಸಹುಡ್ಯ ಸಮೀಪದ ರಸ್ತೆಯಲ್ಲಿ  ಚಿಂತಾಮಣಿಯಿಂದ ಚೇಳೂರಿಗೆ ತೆರಳುತ್ತಿದ್ದಾಗ ವಾಹನದ ಇಂಜಿನ್ ಆಫ್ ನಿಂತು ಹೋಗಿದೆ. ಚಾಲಕ ವಾಹನದಿಂದ ಇಳಿದು ದಡ ಸೇರಲು ಹೋಗುತ್ತಿದ್ದಾಗ ನೀರಿನ ರಭಸಕ್ಕೆ ಆತ ಕೊಚ್ಚಿಕೊಂಡು ರಸ್ತೆಯ ಪಕ್ಕದ ಗುಂಡಿಗೆ ಬಿದ್ದು ಹೋಗಿದ್ದಾನೆ. ಹಾಗೆಯೇ ಪಕ್ಕದಲ್ಲಿದ್ದ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದಾನೆ. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹೊಸಹುಡ್ಯ ಗ್ರಾಮಸ್ಥರು ಜೆಸಿಬಿಯನ್ನು ತರಿಸಿ, ಚಾಲಕನನ್ನು ರಕ್ಷಿಸಿದ್ದಾರೆ. ಇದಕ್ಕೆ ಅಗ್ನಿಶಾಮಕ ದಳದ ಅಧಿಕಾರಿ ಲೋಕೇಶ್ ರವರ ನೇತೃತ್ವದ ತಂಡವು ಸಾಥ್ ನೀಡಿದೆ. 
ಚಿಂತಾಮಣಿ-ಚೇಳೂರು ಮಾರ್ಗದ ಹೊಸಹುಡ್ಯ ಗ್ರಾಮದ ಪಕ್ಕದ ರಸ್ತೆಯಲ್ಲಿ ಕುಶಾವತಿ ನದಿ ಹರಿದು ಹೋಗುತ್ತಿದ್ದು ಜೋರು ಮಳೆ ಬಂದು ಕುಶಾವತಿ ನದಿಯಲ್ಲಿ ನೀರು ಹೆಚ್ಚಾದಾಗ ಈ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಇದಕ್ಕೆ ರಸ್ತೆಯಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net