ಆಗಸದಲ್ಲಿ ಲೋಹ ಹಕ್ಕಿಗಳ ರೋಮಾಂಚನಕಾರಿ ಚಿತ್ತಾರ, ದಸರಾದಲ್ಲಿ ಮನೆಮಾಡಿದ ಸಂಭ್ರಮ

56
Published on

ಮೈಸೂರು: ಆಗಸದಲ್ಲಿ ಲೋಹ ಹಕ್ಕಿಗಳ ರೋಮಾಂಚಕಾರಿ ಚಮತ್ಕಾರ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತು.
ಕಿವಿಗಡಚಿಕ್ಕುವ ಶಬ್ದದೊಂದಿಗೆ ಶರವೇಗದಲ್ಲಿ ಚಿಮ್ಮುವ ಮೂಲಕ ನಭೋ ಮಂಡಲದಲ್ಲಿ ನಾನಾ ಚಿತ್ತಾರ ಮೂಡಿಸಿದ್ದಲ್ಲದೇ ಧೂಮದಲ್ಲಿಯೇ ಹೃದಯದ ಆಕಾರ ಮೂಡಿಸಿ ಮೈಸೂರಿಗರಿಗೆ ವ್ಯಕ್ತಪಡಿಸಿದ ಪ್ರೀತಿಗೆ ನೆರೆದಿದ್ದವರ ಹಷೋದ್ಘಾರದ ಕೃತಜ್ಞತೆ ಸಲ್ಲಿಸಲಾಯಿತು. ನೀಲಾಕಾಶದಲ್ಲಿ ಬಗೆ ಬಗೆಯ ಚಿತ್ತಾರ, ನಿಧಾನವಾಗಿ ಹಾರಿ, ಒಮ್ಮೆಲೇ ಬರ‌್ರೆಂದು ನಭೋ ಮಂಡಲಕ್ಕೆ ಜಿಗಿದ ಲೋಹದ ಹಕ್ಕಿಗಳ ಸಾಹಸಕ್ಕೆ ಜನತೆ ಮನಸೋತರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯು ಪಡೆಯ ಸೂರ್ಯಕಿರಣ ತಂಡದ ವಿಮಾನಗಳು ಪೂರ್ವಭಾವಿ ತಾಲೀಮಿನಲ್ಲಿ ಮೂಡಿಸಿದ ಚಮತ್ಕಾರ ನೋಡುಗರನ್ನು ಸುಮಾರು ಒಂದು ಗಂಟೆ ಕಾಲ ಮುದಗೊಳಿಸುವಲ್ಲಿ ಯಶಸ್ವಿಯಾಯಿತು.
ಕೊಯಮತ್ತೂರಿನ ಸೋಲೂರು ಏರ್ ಬೇಸ್‌ನಿಂದ ಕಾರ್ಯಾಚರಣೆ ಆರಂಭಿಸಿದ ವಿಂಗ್ ಕಮಾಂಡರ್ ಗುರುಪ್ರೀತ್ ಸಿಂಗ್ ನೇತೃತ್ವದ ಸೂರ್ಯಕಿರಣ್ ತಂಡದ 9 ವಿಮಾನಗಳು ಡೈಮಂಡ್ ರಚನೆಯಲ್ಲಿ 4.20ಕ್ಕೆ ಮೈದಾನದತ್ತ ದಾವಿಸಿದವು.
ಬಾನಂಗಳದಲ್ಲಿ ಸದ್ದು ಮಾಡುತ್ತಾ ಜೆಟ್ ವಿಮಾನಗಳು ಬರುತ್ತಿದ್ದಂತೆ ನೆರೆದಿದ್ದವರು ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರ ಕೂಗುತ್ತ ಸಂಭ್ರಮಿಸಿದರು. ಕ್ಷಣದಲ್ಲೇ ವಿಮಾನಗಳು ಮೈದಾನದ ಮತ್ತೊಂದು ದಿಕ್ಕಿನಿಂದ ಸೈನಿಕರ ವಿಜಯದ ಸಂಕೇತವಾದ ‘ವಿಕ್ಟರಿ’ ರಚನೆಯಲ್ಲಿ ಮೂಡಿಸಿ ಪ್ರೇಕ್ಷಕರು ಮೂಕ ವಿಸ್ಮಿತರಾದರು.
ತಂಡದಿಂದ ಒಂದು ವಿಮಾನ ಬೇರ್ಪಟ್ಟು, ಉಲ್ಟಾ ತಿರುಗುತ್ತ, ಬ್ಯಾರೆಲ್ ರೋಲ್ ಮಾಡುತ್ತ, 360 ಡಿಗ್ರಿಯಲ್ಲಿ ಸುತ್ತುತ್ತಾ ಸಾಗುತ್ತಿದ್ದನ್ನು ಕಂಡು ಜನರು ಪುಳಕಿತರಾದರು. ಬಳಿಕ ತಂಡಗಳಾಗಿ ಮಾರ್ಪಟ್ಟು ಬಾನಿನಲ್ಲಿ ಚಿತ್ತಾರ ಬಿಡಿಸಿದ ಸೈನಿಕರ ಸಾಹಸ ಮೈನವಿರೇಳಿಸುವಂತಿತ್ತು.
ಐದು ವಿಮಾನುಗಳು ಸಂಯೋಜನೆಗೊಂಡು ಚಿತ್ತಾರ ಬಿಡಿಸಿದವು. ನಂತರ ಮೂರು ವಿಮಾನಗಳು ರಾಕ್ ಆ್ಯಂಡ್ ರೋಲ್ ರಚನೆಯಲ್ಲಿ ಒಂದರ ಸುತ್ತ ಒಂದು ಸುತ್ತುತ್ತ ಸಾಗುತ್ತಿದ್ದಂತೆ ನೆರೆದಿದ್ದವರು ಉದ್ಘಾರ ತೆಗೆದರು.
ಡಿಎನ್‌ಎ ರಚನೆಯಲ್ಲಿ ಮೂರು ವಿಮಾನಗಳ ಸುತ್ತ ಎರಡು ವಿಮಾನಗಳು ಸುತ್ತುತ್ತ ಸಾಗಿದರೆ, ಮೂರು ವಿಮಾನಗಳು ಸಾಲಾಗಿ ಬಂದು ಎರಡು ಬೇರೆ ದಿಕ್ಕಿನಲ್ಲಿ ಸಾಗಿ ಒಂದು ನೇರವಾಗಿ ಸಾಗಿದ ದೃಶ್ಯ ಮನಮೋಹಕವಾಗಿತ್ತು.
ವಿರುದ್ಧ ದಿಕ್ಕಿನಲ್ಲಿ ಬಿಳಿ ಹೊಗೆ ಸೂಸುತ್ತಾ ಎದುರು-ಬದುರಾಗಿ ಬಂದು ಶರವೇಗದಲ್ಲಿ ಹಾರಾಟ ನಡೆಸಿದ್ದು ನೆರೆದಿದ್ದ ಜನರ ಎದೆ ಬಡಿತ ಜೋರು ಮಾಡಿತ್ತು. ವಿಮಾನಗಳ ಸುತ್ತ ಇನ್ನೇರಡು ಸೂರ್ಯಕಿರಣ ವಿಮಾನ ಪಲ್ಟಿ ಹಾಕುತ್ತಾ ಬಲದಿಂದ ಎಡಕ್ಕೆ ಹಾರಿದ್ದು, ನೋಡುಗರ ಮೈನವಿರೇಳಿಸಿತ್ತು. ಪ್ರೇಮ ಸಂಕೇತವಾದ ಹೃದಯದ ಚಿತ್ತಾರ ಬಿಡಿಸಿದ ಸೂರ್ಯಕಿರಣ್ ತಂಡಕ್ಕೆ ಮೈಸೂರಿಗರು ಫಿದಾ ಆದರು.
ಕಿಕ್ಕಿರಿದು ತುಂಬಿದ್ದ ಜನ:
ದಸರಾ ಅಂಗವಾಗಿ 4 ವರ್ಷಗಳ ಬಳಿಕ ಆಯೋಜಿಸಿದ್ದ ಏರ್ ಶೋ ಪೂರ್ವಭಾವಿ ತಾಲೀಮು ಆಕರ್ಷಣೆ ಹೆಚ್ಚಿಸಿದ್ದರಿಂದ 35 ಸಾವಿರಕ್ಕೂ ಹೆಚ್ಚು ಜನರು ಕಿಕ್ಕಿರಿದು ತುಂಬಿದ್ದರು. 4 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನದಿಂದಲೇ ಮೈದಾನದತ್ತ ಧಾವಿಸಿಬಂದಿದ್ದರು.
ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಇಂಡಿಯನ್ ಏರ್‌ಫೋರ್ಸ್‌ನ ಸೂರ್ಯಕಿರಣ್ ತಂಡದವರು ನಡೆಸಿಕೊಟ್ಟ ಪ್ರದರ್ಶನಕ್ಕೆ ಮನಸೋತರು. ಮೈದಾನದ ಅಕ್ಕಪಕ್ಕದ ಬೃಹತ್ ಕಟ್ಟಡಗಳನ್ನೇರಿ ಕುಳಿತು ವಿಮಾನಗಳ ಸಾಹಸ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net