

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಐದು ದಿನ ಮದ್ಯ ಮಾರಾಟ ನಿಷೇಧವನ್ನು ಬಂಡವಾಳ ಮಾಡಿಕೊಂಡು ಅಕ್ರಮ ಮದ್ಯ ಮಾರಾಟ ದಂಧೆ ಹೆಡೆಬಿಚ್ಚುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವಿಶೇಷ ಕಾರ್ಯಾಚರಣೆ ರೂಪಿಸಿದೆ.
ವಿಧಾನ ಪರಿಷತ್ ಚುನಾವಣೆ, ಲೋಕಸಭಾ ಚುನಾವಣೆ ಮತ ಎಣಿಕೆ, ಪದವಿಧರ ಕ್ಷೇತ್ರ ಚುನಾವಣೆ ಮತ ಎಣಿಕೆ ಕಾರಣ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈಗಾಗಲೇ ಹೆಚ್ಚಿನ ಲಾಭದ ಆಸೆಗೆ ಅಕ್ರಮ ಮದ್ಯ ಮಾರಾಟಕ್ಕೆ ಜಿಲ್ಲೆಯ ಹಲವು ಕಡೆಗಳಲ್ಲಿ ಸಿದ್ದತೆ ನಡೆಯುತ್ತಿರುವ ಮಾಹಿತಿ ಹರಿದಾಡುತ್ತಿದ್ದು, ಜಿಲ್ಲಾ ಅಬಕಾರಿ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಕಾರ್ಯಾಚರಣೆ ರೂಪಿಸಿದೆ.
2 ರ ಸಂಜೆಯಿಂದ 7 ರ ಮುಂಜಾನೆ 6 ರವರೆಗೆ ಬಂದ್: ಒಂದು ಚುನಾವಣೆ ಎರಡು ಮತ ಎಣಿಕೆ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಜೂ 2ರ ಸಂಜೆ 6ರಿಂದ ಜೂ.7 ರ ಮುಂಜಾನೆ 6 ಗಂಟೆವರೆಗೆ ಎಲ್ಲ ಮದ್ಯಮಾರಾಟ ಮಳಿಗೆಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಆದೇಶದನ್ವಯ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯದಂಗಡಿಗಳಿಗೆ ಸೀಲ್: ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಮದ್ಯ ಮಾರಾಟ ಮಳಿಗೆಗಳ ಬಾಗಿಲು ಬಂದ್ ಮಾಡಿ ಜಿಲ್ಲಾಡಳಿತದಂದ ಸೀಲ್ ಹಾಕಲಾಗುತ್ತದೆ. ಜೂ.7ರಂದು ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್ ತೆಗೆಯುವ ಮೂಲಕ ಮದ್ಯ ಮಾರಾಟಕ್ಕೆ ಅನುಮತಿಸಲಾಗುತ್ತದೆ. ಈ ಅವಧಿಯಲ್ಲಿ ಎಲ್ಲಿಯಾದರೂ ಮದ್ಯದಂಗಡಿಗಳ ಸೀಲ್ ತೆರೆದಿರುವುದು ಗಮನಕ್ಕೆ ತಂದರೆ ಅಬಕಾರಿ ಕಾಯ್ದೆಯಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಸಾರ್ಟ್, ಪಬ್‌ಗಳ ಮೇಲೆ ಕಣ್ಣು: ಮದ್ಯದಂಗಡಿಗಳು ಬಾಗಿಲು ಹಾಕಿಕೊಂಡರೆ ಗ್ರಾಹಕರು ರೆಸಾರ್ಟ್, ಪಬ್‌ಗಳತ್ತ ಮುಖಮಾಡುತ್ತಾರೆ. ಪರೋಕ್ಷವಾಗಿ ಇಂಥ ಸ್ಥಳಗಳಲ್ಲಿ ದುಪ್ಪಟ್ಟು ದರದಲ್ಲಿ ಮದ್ಯ ಪೂರೈಸಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ರೆಸಾರ್ಟ್ ಮತ್ತಿತರ ಹಾಲ್ಕೋಹಾಲ್ ಪೂರೈಕೆ ಕೇಂದ್ರಗಳಿಗೆ ಈಗಾಗಲೆ ಎಚ್ಚರಿಕೆ ರವಾನಿಸಿದ್ದು ದಿಢೀರ್ ದಾಳಿ ನಡೆಯುವ ಬಗ್ಗೆ ಇಲಾಖೆ ಅಧಿಕಾರಿಗಳು ಸಜ್ಜಾಗಿದ್ದಾರೆ.
ಗೂಡಂಗಡಿಗಳಿಗೆ ಸುಗ್ಗಿ: ಗ್ರಾಮೀಣ ಪ್ರದೇಶದ ದಿನಸಿ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಗುಟ್ಟಾಗಿ ಉಳಿದಿಲ್ಲ. ಈ ಬಾರಿ ನಿರಂತರವಾಗಿ ಐದು ದಿನಗಳ ಕಾಲ ಮದ್ಯದಂಗಡಿಗಳು ಬಾಗಿಲು ಹಾಕಿಕೊಳ್ಳುವುದರಿಂದ ಇಂಥ ಗೂಡಂಗಡಿ ಮಾಲೀಕರಿಗೆ ಇದು ಸುಗ್ಗಿ ಹಬ್ಬದಂತಾಗಿದೆ. ಈ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಸಿದ್ದರಾಗಿರುವ ಇಂಥ ಅಂಗಡಿ ಮಾಲೀಕರು ಈಗಾಗಲೇ ಮದ್ಯ ದಾಸ್ತಾನಿಗೆ ರಹಸ್ಯ ತಾಣಗಳನ್ನ ಸಿದ್ದಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಬಾರ್‌ಗಳ ಒಳ ಒಪ್ಪಂದ!: ಇನ್ನೂ ಇದೇ ಸಂದರ್ಭದಲ್ಲಿ ನಷ್ಟವನ್ನು ಸರಿದೂಗಿಸಲು ಬಾರ್,ವೈನ್ಸ್ ಮಾಲೀಕರು ಇಂಥ ಗೂಡಂಗಡಿಯವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕೇಸ್‌ಗಟ್ಟಲೆ ಮದ್ಯ ಪೂರೈಸಲು ಮಾತುಕತೆ ನಡೆಸಿದ್ದಾರೆ. ಬಾಟಲ್‌ಗಳ ಎಂಆರ್‌ಪಿ ದರದಲ್ಲೇ ಇಂಥ ಅಂಗಡಿಯವರಿಗೆ ಮದ್ಯ ಪೂರೈಸಲು ಸನ್ನದ್ಧರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಚುರುಕುಗೊಂಡ ವ್ಯಾಪಾರ: ಜೂ. 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ 2 ಸಂಜೆ 4 ಗಂಟೆಯಿಂದಲೇ ಮದ್ಯದಂಗಡಿಗಳು ಬಂದ್ ಆಗಲಿದ್ದು, ಜೂ.3 ರವರೆಗೆ ಯಥಾಸ್ಥಿತಿ ಇರಲಿದೆ. ಅದೇ ರೀತಿ, ಜೂ.4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಇನ್ನು ಜೂ. 6 ರಂದು ವಿಧಾನ ಪರಿಷತ್ತಿನ ಚುನಾವಣೆ ಮತ ಎಣಿಕೆ ಇರುವ ಕಾರಣ ಬಂದ್ ಮುಂದುವರೆಯಲಿದ್ದು, ಮದ್ಯಪ್ರಿಯರು ಈಗಿನಿಂದಲೇ ಮದ್ಯ ದಾಸ್ತಾನು ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದು, ಮದ್ಯದಂಗಡಿಗಳಲ್ಲಿ ದಿಢೀರ್ ವ್ಯಾಪಾರ ಚುರುಕುಗೊಂಡಿದೆ.
ಒಂದು ಚುನಾವಣೆ ಎರಡು ಮತ ಎಣಿಕೆ ಕಾರಣದಿಂದ ಜೂ.2ರ ಸಂಜೆಯಿಂದ 7 ರ ಮುಂಜಾನೆವರೆಗೆ ಎಲ್ಲ ಬಗೆಯ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುತ್ತದೆ. ಈ ವೇಳೆ ಎಲ್ಲಿಯಾದರೂ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಸಿಬ್ಬಂದಿ ಪ್ಯಾಟ್ರೋಲ್ ಮಾಡಲಿದ್ದು, ಸಿಕ್ಕಿಬಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.
ನಾರಾಯಣ್, ಅಬಕಾರಿ ಇಲಾಖೆ ಸೂಪರಿಡಿಡೆಂಟ್ ಬೆಂ.ಗ್ರಾಮಾಂತರ