

ಬೆಳಗಾವಿ: ರಾಜ್ಯದಲ್ಲಿ ಕಳೆದ ಐದು ತಿಂಗಳಿಂದ ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ಬರಬೇಕಿದ್ದ ಆದಾಯ ಶೇ. 50ರಷ್ಟು ಕುಸಿದಿದ್ದು, 3 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ ಹೇಳಿದ್ದಾರೆ.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶನಿವಾರ ನಡೆದ ಅಬಕಾರಿ ಇಲಾಖೆ ಬೆಳಗಾವಿ ವಿಭಾಗಮಟ್ಟದ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪಬ್, ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ಸಿಕ್ಕ ನಂತರ ಆದಾಯದಲ್ಲಿ ಚೇತರಿಕೆ ಕಂಡುಬರಲಿದೆ ಎಂದರು. ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಗೋವಾ ಮೂಲಕ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿದ್ದು, ಅದನ್ನು ತಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಚಿಂತನೆ ನಡೆಸಿದ್ದೇವೆ ಎಂದರು.
ಶಸಾಸ ನೀಡಲು ಚಿಂತನೆ: ಕಳ್ಳಬಟ್ಟಿ ಸಾರಾಯಿ ತಯಾರಿಕೆ ಅಡ್ಡೆಗಳ ಮೇಲೆ ದಾಳಿಗೆ ಹೋದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೂ ಹಲ್ಲೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ, ರಕ್ಷಣೆ ದೃಷ್ಟಿಯಿಂದ ಅವರಿಗೂ ಶಸಾಸ ನೀಡಿ ನೈತಿಕ ಬಲ ಹೆಚ್ಚಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಈ ವರ್ಷ ಅಬಕಾರಿ ಇಲಾಖೆಯಲ್ಲಿ ಬಹಳಷ್ಟು ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಸೇವಾ ಜ್ಯೇಷ್ಠತೆ ಆಧರಿಸಿ, ಮುಂದಿನ ತಿಂಗಳು ಇನ್ನಷ್ಟು ಸಿಬ್ಬಂದಿಗೆ ಬಡ್ತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಆರೋಪ ನಿರಾಧಾರ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಪಕ್ಷ ಸಂಘಟನೆಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಅವರು ಎಂದೂ ಹಸ್ತಕ್ಷೇಪ ಮಾಡಿಲ್ಲ. ವಿವಿಧ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪ ನಿರಾಧಾರವಾದದ್ದು ಎಂದು ಪ್ರಶ್ನೆಯೊಂದಕ್ಕೆ ಸಚಿವ ನಾಗೇಶ ಉತ್ತರಿಸಿದರು. ಅಬಕಾರಿ ಆಯುಕ್ತ ಎಂ.ಲೋಕೇಶ, ಅಬಕಾರಿ ಜಂಟಿ ಆಯುಕ್ತ ಡಾ. ವೈ.ಮಂಜುನಾಥ ಇತರರಿದ್ದರು.
ಸುವರ್ಣ ವಿಧಾನಸೌಧ ನಿರ್ವಹಣೆಯಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಶ, ಈ ಬಗ್ಗೆ ಉಪಮುಖ್ಯಮಂತ್ರಿಯೂ ಆಗಿರುವ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಜತೆ ಮಾತನಾಡುವೆ. ಸುವರ್ಣ ವಿಧಾನಸೌಧವನ್ನು ಸರಿಯಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳುವಂತೆ ಗಮನ ಸೆಳೆಯುವುದಾಗಿ ತಿಳಿಸಿದರು. ಈ ವರ್ಷ ಸುವರ್ಣ ವಿಧಾನಸೌಧದಲ್ಲೇ ಚಳಿಗಾಲ ಅಧಿವೇಶನ ನಡೆದರೆ ಒಳ್ಳೆಯದು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ವಿಚಾರವಾಗಿ ಸಿಎಂ ಗಮನ ಸೆಳೆದಿದ್ದಾರೆ ಎಂದು ಪ್ರತಿಕ್ರಿಯಿಸಿದರು.