ಮಧ್ಯವರ್ತಿಗಳಿಂದ ಮೋಸ ಹೋಗಬೇಡಿ: ಅಬಕಾರಿ ಉಪ ಆಯುಕ್ತ ಆರ್.ನಾಗಸೇನ ಕಿವಿಮಾತು

Excise awareness meeting Mandya
Published on

ಮಂಡ್ಯ: ಅಬಕಾರಿ ಪರವಾನಗಿ ಕೊಡಿಸುವುದಾಗಿ ಹೇಳಿ ಮಧ್ಯವರ್ತಿಗಳು ದುರುಪಯೋಗಪಡಿಸುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಅಂತಹವರಿಂದ ದೂರು ಇರಬೇಕು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್.ನಾಗಸೇನ ಸಲಹೆ ನೀಡಿದರು.

ನಗರದ ಸ್ಫೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಮದ್ಯಮಾರಾಟಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಅಬಕಾರಿ ಜಾಗೃತಿ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹೊಸದಾಗಿ ತೆರೆಯುವ ವೈನ್ಸ್ ಸ್ಟೋರ್ ಹಾಗೂ ಇತರೆ ಅಬಕಾರಿ ಇಲಾಖೆಯಲ್ಲಿ ಕೆಲಸ ಆಗಬೇಕಿರುವುದನ್ನು ಮುಂದಿಟ್ಟುಕೊಂಡು ಕೆಲವು ಮಧ್ಯವರ್ತಿಗಳು ಹಣ ತೆಗೆದುಕೊಂಡು ವಂಚಿಸುತ್ತಿದ್ದಾರೆ. ದಯಮಾಡಿ ಇದಕ್ಕೆ ಕಿವಿಗೊಡಬೇಡಿ. ಇಲಾಖೆಯಲ್ಲಿ ಕಾನೂನಾತ್ಮಕವಾಗಿಯೇ ಕೆಲಸ ನಡೆಯುತ್ತದೆ ಎಂಬುದನ್ನು ಗಮನಲ್ಲಿಟ್ಟುಕೊಳ್ಳಬೇಕು ಎಂದು ವಿವರಿಸಿದರು.

ಮಾರಾಟಗಾರರು ಅಂಗಡಿಗಳನ್ನು ಯಾವ ಸಮಯದಲ್ಲಿ ಮುಚ್ಚುವುದು ಮತ್ತು ತೆರೆಯಬೇಕೆಂಬುದರ ಬಗ್ಗೆ ಅರಿವಿರಬೇಕು. ಅದನ್ನು ತಪ್ಪದೇ ಪಾಲಿಸಬೇಕು. ವಿನಾಕಾರಣ ಪೊಲೀಸರು ಬಂದು ತೊಂದರೆ ಕೊಟ್ಟರೆ ನನ್ನ ಗಮನಕ್ಕೆ ತಂದರೆ ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ. ಕಾನೂನಾತ್ಮಕವಾಗಿ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ. ವೈನ್ಸ್ ಸ್ಟೋರ್‌ಗಳಲ್ಲಿ ಪ್ಲಾಸ್ಟಿಕ್ ಗ್ಲಾಸ್ ಸೇರಿದಂತೆ ಇತರೆ ಪ್ಲಾಸ್ಟಿಕ್ ಪದಾರ್ಥಗಳನ್ನು ಬಳಸದಂತೆ ತಿಳಿಸುತ್ತೇವೆ. ಪ್ಲಾಸ್ಟಿಕ್ ಬದಲಿಗೆ ಬೇರೆ ವಸ್ತುಗಳ ಮೂಲಕ ಬಳಸಿಕೊಳ್ಳುವಂತೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತೇವೆ. ಒಟ್ಟಿನಲ್ಲಿ ಪರಿಸರ ಸಂರಕ್ಷಣೆಗೂ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಮದ್ಯ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್ ಮಾತನಾಡಿ, ಸಂಘದ ಸಮಸ್ಯೆಗಳು ಏನಾದರೂ ಇದ್ದರೆ ಎಲ್ಲರೂ ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರೋಣ. ವಿನಾಕಾರಣ ತೊಂದರೆ ಕೊಡುವುದನ್ನು ತಪ್ಪಿಸಲು ಕಾನೂನಾತ್ಮಕವಾಗಿಯೇ ಹೋಗೋಣ ಎಂದು ತಿಳಿಸಿದರು.

ಅಬಕಾರಿ ಉಪ ಅಧೀಕ್ಷಕ ರಾಧಾಮಣಿ, ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮರೀಗೌಡ, ದಿನೇಶ್, ಗೋವಿಂದ್ ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net