

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಲೋಕಸಭೆ ಚುನಾವಣೆ ಮಾದರಿ ನೀತಿಸಂಹಿತೆ ಜಾರಿಗೂ ಮುನ್ನವೇ ಗ್ರಾಮಾಂತರ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಲರ್ಟ್ ಆಗಿದೆ.
ಚುನಾವಣೆ ವೇಳೆ ಹಣದೊಂದಿಗೆ ಮದ್ಯದ ಹೊಳೆ ಹರಿಸುವ ರಾಜಕೀಯ ಮುಖಂಡರ ಮೇಲೆ ತೀವ್ರ ನಿಗಾವಹಿಸುವಂತೆ ಕೇಂದ್ರ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳ ಅಬಕಾರಿ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಅಕ್ರಮ ಮದ್ಯವಹಿವಾಟಿಗೆ ಕಡಿವಾಣ ಹಾಕುವಂತೆ ತಾಕೀತು ಮಾಡಿದ್ದಾರೆ.
ಲೋಕಸಭಾ ಚುನಾವಣೆ ದಿನಾಂಕ ೋಷಣೆ ಸನ್ನಿಹಿತವಾಗುತ್ತಿದ್ದಂತೆ ಗರಿಬಿಚ್ಚಿರುವ ಅಕ್ರಮ ಮದ್ಯ ಮಾರಾಟ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಸಾಗಿದೆ. ಈ ಬಗ್ಗೆ ಸಾರ್ವಜನಿಕರಿಂದಲೂ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತ ಅಬಕಾರಿ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.
ನಿಯಂತ್ರಣ ಕೊಠಡಿ ಸ್ಥಾಪನೆ: ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿನ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಕೇಂದ್ರ ಅಬಕಾರಿ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದ್ದು, ದೂರವಾಣಿ ಸಂಖ್ಯೆ 080-29787450 ನಿಗಧಿಪಡಿಸಿದೆ ಹಾಗೆಯೇ ಟೋಲ್ ಫ್ರೀ ಸಂಖ್ಯೆಗೆ 18004255273ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಇಲಾಖೆ ಮನವಿ ಮಾಡಿದೆ. ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಭಾರತೀಯ ತಯಾರಿಕಾ ಮದ್ಯ ಹಾಗೂ ಅಬಕಾರಿ ವಸ್ತುಗಳ ಮಾಲೀಕತ್ವ ದಾಸ್ತಾನು, ಸಾಗಾಣಿಕೆ, ಮಾರಾಟ ಮತ್ತು ಸಾರ್ವಜನಿಕರಿಗೆ ಹಂಚುವಿಕೆ ಇತ್ಯಾದಿ ಅಬಕಾರಿ ಅಕ್ರಮಗಳ ಬಗ್ಗೆ ಯಾವುದೇ ದೂರುಗಳು ಅಥವಾ ಮಾಹಿತಿ ಇದ್ದಲ್ಲಿ ಕರೆ ಮಾಡಿ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಗೂಡಂಗಡಿ ಮಾಲೀಕರಿಗೆ ವಾರ್ನಿಂಗ್ ಚುನಾವಣೆ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಗೂಡಂಗಡಿಗಳು ಅಕ್ರಮ ಮದ್ಯ ಮಾರಾಟದ ಕೇಂದ್ರ ಸ್ಥಾನವಾಗಿ ಕೆಲಸ ಮಾಡುವುದು ಗುಟ್ಟಾಗಿ ಉಳಿದಿಲ್ಲ. ನಗರ ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿನ ಇಂಥ ಅಂಗಡಿಗಳೇ ಅಕ್ರಮ ಮದ್ಯ ಮಾರಾಟದ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಬಕಾರಿ ಸಿಬ್ಬಂದಿ ಗ್ರಾಮಗ್ರಾಮಗಳಲ್ಲಿ ಗೂಡಂಗಡಿ ಮಾಲೀಕರಿಗೆ ಎಚ್ಚರಿಕೆ ರವಾನಿಸುವ ಕೆಲಸ ಆರಂಭಿಸಿದೆ. ಅಲ್ಲದೆ ಪ್ರತಿ ಮದ್ಯದಂಡಿ ಮಾಲೀಕರ ಸಭೆ ಕರೆದು ಅಕ್ರಮ ಮದ್ಯ ಸರಬರಾಜು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹರಿಯಲಿದೆ ಮದ್ಯದ ಹೊಳೆ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಜಿಲ್ಲೆಯಲ್ಲಿ ಮದ್ಯದ ಹೊಳೆಯೇ ಹರಿದಿತ್ತು. ಅಬಕಾರಿ ಇಲಾಖೆಯ ಕಣ್ಗಾವಲನ್ನೂ ತಪ್ಪಿಸಿ ಅಕ್ರಮ ಮದ್ಯ ವಹಿವಾಟು ನಡೆದಿತ್ತು. ಅನೇಕ ವಾಹನಗಳು ಲಕ್ಷಾಂತರ ರೂ.ಮೌಲ್ಯದ ಮದ್ಯವನ್ನು ಇಲಾಖೆ ಜಪ್ತಿ ಮಾಡಿತ್ತು. ಲೋಕಸಭಾ ಚುನಾವಣೆ ವೇಳೆ ಈ ಬಾರಿ ಕಳೆದ ಚುನಾವಣೆಯನ್ನೂ ಮೀರಿಸುವಷ್ಟು ಮದ್ಯದ ಘಾಟು ಅಮರಲಿದೆ ಎಂಬ ಹಿನ್ನೆಲೆಯಲ್ಲಿ ಇಲಾಖೆ ಅಲರ್ಟ್ ಆಗಿದೆ.
ಲೋಕಸಭಾ ಚುನಾವಣೆ ದಿನಾಂಕ ೋಷಣೆ ಸನ್ನಿಹಿತವಾಗಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಜಂಟಿ ಸಭೆ ನಡೆಸಲಾಗಿದ್ದು, ತೀವ್ರ ತಪಾಸಣೆ ಮೂಲಕ ಕಣ್ಗಾವಲು ಇರಿಸುವಂತೆ ತಿಳಿಸಲಾಗಿದೆ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮದ್ಯದಂಗಡಿ ಮಾಲೀಕರ ಸಭೆ ಕರೆದು ಅಕ್ರಮ ಮದ್ಯ ಮಾರಾಟದ ವಿರುದ್ಧ ಎಚ್ಚರಿಕೆ ನೀಡಲಾಗಿದೆ, ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿನ ಗೂಡಂಗಡಿ ಮಾಲೀಕರಿಗೂ ಎಚ್ಚರಿಕೆ ರವಾನಿಸಲಾಗಿದೆ, ಜಿಲ್ಲಾಡಳಿತ ಭವನ ಸೇರಿ ನಾಲ್ಕೂ ತಾಲೂಕುಗಳಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಿದ್ದು, ಎಲ್ಲಿಯಾದರೂ ಅಕ್ರಮ ಮದ್ಯದ ಮಾಹಿತಿ ಕಂಡರೆ ತಕ್ಷಣ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಬಿ.ಎಂ ಸುನೀಲ್, ಅಬಕಾರಿ ನಿರೀಕ್ಷಕ ದೇವನಹಳ್ಳಿ ವಲಯ