

ಗೋಣಿಕೊಪ್ಪಲು: ಇದೇ ಮೊದಲ ಬಾರಿಗೆ ಇಲ್ಲಿನ ಕಾಪ್ಸ್ ವಿದ್ಯಾಸಂಸ್ಥೆಗೆ ಬುಧವಾರ ಪ್ರತಿಷ್ಠಿತ ಇಸ್ರೋ ಸಂಸ್ಥೆಯ 18 ವಿಜ್ಞಾನಿಗಳು ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯುವ ಮೂಲಕ ಭವಿಷ್ಯದಲ್ಲಿ ರೂಪಿಸಬಹುದಾದ ಯೋಜನೆಗಳ ಕುರಿತು ಬೆಳಕು ಚೆಲ್ಲಿದರು.
ಜಿಲ್ಲೆಯ 20ಕ್ಕೂ ಅಧಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಶ್ವ ಬಾಹ್ಯಾಕಾಶ ಸಪ್ತಾಹದಲ್ಲಿ ಭಾಗಿಯಾದರು. ಪ್ರತಿಷ್ಠಿತ ಇಸ್ರೋ ಸಂಸ್ಥೆಯ 18 ವಿಜ್ಞಾನಿಗಳು ಇಸ್ರೋ ವಿಜ್ಞಾನಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಎನ್‌ಸಿಸಿ ವಿದ್ಯಾರ್ಥಿಗಳು ಗೌರವ ನೀಡುವ ಮೂಲಕ ವೇದಿಕೆಗೆ ಕರೆತಂದರು.
ಇಸ್ರೋ ವಿಜ್ಞಾನಿಗಳನ್ನು ಜಿಲ್ಲೆಯ ವಿದ್ಯಾರ್ಥಿಗಳು ಅತ್ಯಂತ ಸಮೀಪದಿಂದ ನೋಡುವ ಹಾಗೂ ಅವರೊಂದಿಗೆ ಮುಕ್ತವಾಗಿ ವಿಚಾರ ವಿನಿಮಯ ನಡೆಸುವ ಅವಕಾಶವನ್ನು ಕಾಪ್ಸ್ ಸಂಸ್ಥೆ ಕಲ್ಪಿಸಿತ್ತು. ಸಂಸ್ಥೆ ಆವರಣದಲ್ಲಿ ಇಸ್ರೋ ವತಿಯಿಂದ ಉಪಗ್ರಹ ಹಾಗೂ ರಾಕೆಟ್ ಮಾದರಿಗಳ ಪ್ರದರ್ಶನ ಇಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಣೆ ಮಾಡಿದರು.
ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಯು.ಆರ್.ರಾವ್ ಉಪಗ್ರಹ ಕೇಂದ್ರದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಅಂತರಿಕ್ಷ ವಾರಾಚರಣೆ -2025 ಅನ್ನು ಕಾಪ್ಸ್ ವಿದ್ಯಾಸಂಸ್ಥೆ ಯಶಸ್ವಿಯಾಗಿ ಆಚರಿಸಿತು.
ಇಸ್ರೋದ ಹಿರಿಯ ವಿಜ್ಞಾನಿ ಸಂಜೀವ್‌ಕುಮಾರ್ ಮಾತನಾಡಿ, ಇಸ್ರೋ ವಿಜ್ಞಾನಿಗಳು ಪ್ರಪಂಚದ 90ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸುವ ವಿಶ್ವ ಬಾಹ್ಯಾಕಾಶ ಸಪ್ತಾಹ ಅಕ್ಟೋಬರ್‌ನಲ್ಲಿ ನಡೆಯುತ್ತಿದೆ. ಇದು ಜಗತ್ತಿನ ಅತಿದೊಡ್ಡ ಆಂತರಿಕ ಉತ್ಸವವಾಗಿದೆ. ಅಂತರಿಕ್ಷ ಮತ್ತು ಹವಾಮಾನ ಬದಲಾವಣೆ ಬಾಹ್ಯಾಕಾಶ ವಿಜ್ಞಾನ ವಾತಾವರಣ ಸವಾಲುಗಳಿಗೆ ಹೇಗೆ ಪರಿಹಾರ ಒದಗಿಸಬಹುದು ಎಂಬುದರ ಮೇಲೆ ಗಂಭೀರ ಚರ್ಚೆ ನಡೆಯಲಿದೆ. ಅಲ್ಲದೆ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವುದು ಸಪ್ತಾಹದ ಮೂಲ ಉದ್ದೇಶವಾಗಿದೆ ಎಂದರು.
ಶಾಲೆಯ ಹಿರಿಯ ವಿದ್ಯಾರ್ಥಿ, ವಿಜ್ಞಾನಿ ಡಾ.ಕೊಳ್ಳಿಮಾಡ ಸೋಮಣ್ಣ ಉದ್ಘಾಟಿಸಿ ಮಾತನಾಡಿ, ಇಸ್ರೋ ಸಂಸ್ಥೆ ಸಾಕಷ್ಟು ಆವಿಷ್ಕಾರಗಳನ್ನು ಹೊರತಂದಿದೆ. ವಿದ್ಯಾರ್ಥಿಗಳ ಬಳಿಯೇ ಅನುಭವಿ, ಹಿರಿಯ ವಿಜ್ಞಾನಿಗಳು ಆಗಮಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಪ್ಸ್ ವಿದ್ಯಾ ಸಂಸ್ಥೆ ಅಧ್ಯಕ್ಷೆ ಕೆ.ಧನ್ಯಾ ಸುಬ್ಬಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಇಸ್ರೋ ವಿಶ್ವ ಆಂತರಿಕ್ಷ ವಾರಾಚರಣೆ ಸದ್ಬಳಕೆಯಾಗಲಿ. 20 ವರ್ಷಕ್ಕೊಮ್ಮೆ ಬರುವ ಅವಕಾಶ ಈ ಬಾರಿ ಕೊಡಗಿನ ಕಾಪ್ಸ್ ಸಂಸ್ಥೆಗೆ ಬಂದಿದೆ. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲರೂ ಆದ ಪ್ರೊ.ನಂಜುಂಡ ಮಾತನಾಡಿ, ಕಾಪ್ಸ್ ಸಂಸ್ಥೆಯು ನೂರಾರು ವಿದ್ಯಾರ್ಥಿಗಳನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಶಾಲೆ ವಿದ್ಯಾರ್ಥಿ ಕಾಳಿಮಾಡ ಸೋಮಣ್ಣ ನಮ್ಮ ಮುಂದಿರುವುದು ಹೆಮ್ಮೆ ತಂದಿದೆ. ಸಾಧನೆಗೆ ಸೋಮಣ್ಣ ಸಾಕ್ಷಿಯಾಗಿದ್ದಾರೆ. ಪ್ರತಿಭೆಗಳಿಗೆ ಅವಕಾಶವಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಇಸ್ರೋ ವಿಜ್ಞಾನಿಗಳಾದ ಸಂಜೀವ್, ಪ್ರಕಾಶ್, ರಾಜೇಶ್ವರಿ, ವಿಷ್ಣು ಪೈ, ರಚನಾ, ಪ್ರಸಾದ್, ಕಿರಣ್, ಮಾದೇವಸ್ವಾಮಿ, ನವೀನ್ ಕುಮಾರ್, ಪ್ರಶಾಂತ್‌ಕುಮಾರ್, ಅಭಿಲಾಷ್ ಸೇರಿದಂತೆ 18 ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಜಿಲ್ಲೆಯ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಪ್ಸ್ ಸಂಸ್ಥೆ ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು. ಜಿಲ್ಲೆಯ ವಿವಿಧ ಭಾಗದಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಉಪಗ್ರಹ ಹಾಗೂ ರಾಕೆಟ್ ಮಾದರಿಗಳ ಪ್ರದರ್ಶನ, ಗಮನ ಸೆಳೆಯಿತು.
ಇಸ್ರೋ ಸಂಸ್ಥೆ ಬೆಳೆದು ಬಂದ ಹಾದಿ ಹಾಗೂ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಚಿತ್ರ ಸಹಿತ ಸಂಸ್ಥೆಯ ಹಿರಿಯ ವಿಜ್ಞಾನಿ ರಾಜೇಶ್ವರಿ ವಿವರಣೆ ನೀಡಿದರು. ಕಾಪ್ಸ್ ಪ್ರಾಂಶುಪಾಲ ಡಾ.ಎಂ.ರಾಮಚಂದ್ರನ್, ವಿದ್ಯಾಸಂಸ್ಥೆಯ ಖಜಾಂಚಿ ಎಂ.ಟಿ.ಮಾಚಯ್ಯ, ಸಿ.ಎಸ್.ಸೋಮಯ್ಯ, ಕುಲ್ಲಚಂಡ ಶ್ವೇತಾ ಗಣಪತಿ ಇತರರು ಉಪಸ್ಥಿತರಿದ್ದರು.