

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಅತಿರೇಕದ ತಂತ್ರಜ್ಞಾನದ ಅಳವಡಿಕೆಯಿಂದ ಗುರು ಹಾಗೂ ಶಿಷ್ಯರ ನಡುವಿನ ಸಂವಾದ ಕಡಿಮೆಯಾಗುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಗೌರವ್ ಪ್ರಕಾಶನ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಪಿ.ವಿ.ನಾಗರಾಜ ರಚನೆಯ ಗುರುವೆ ನಿಮಗೆ ಶರಣು ಮತ್ತು ಹೆಚ್ಚೇವು ಕನ್ನಡದ ದೀಪ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಗೆ ನಾನು ವಿರೋಧಿಸುವುದಿಲ್ಲ. ಆದರೆ, ಅದು ಇತಿಮಿತಿಯಲ್ಲಿ ಇರಬೇಕು. ತರಗತಿಯಲ್ಲಿ ತಂತ್ರಜ್ಞಾನ ಎಷ್ಟು ಬೇಕು, ಎಷ್ಟು ಬೇಕಾಗಿಲ್ಲ ಎಂಬ ವಿವೇಚನೆ ಸಹ ಇಲ್ಲ. ತರಗತಿಯಲ್ಲಿ ಗುರು-ಶಿಷ್ಯರ ನಡುವೆ ಹೃದಯ ಸಂವಾದ ನಡೆಸಲು ಸಾಧ್ಯವಾಗಬೇಕು. ತರಗತಿಯಲ್ಲಿ ನಾವು ಸೃಷ್ಟಿ ಮಾಡುತ್ತಿರುವುದು ಯಂತ್ರಮಾನವರಲ್ಲ ಎಂಬ ವಿವೇಚನೆ ಇರಬೇಕು. ಮನುಷ್ಯನ ಒಳಗೆ ಒಂದು ಮನಸ್ಸು ಇದೆ ಎಂಬುದನ್ನು ಅರಿಯಬೇಕು. ಅತಿಯಾದ ತಂತ್ರಜ್ಞಾನ ಬಳಕೆಯು ಗುರು-ಶಿಷ್ಯರ ನಡುವಿನ ಮಾನವೀಯ ಸಂಬಂಧವನ್ನು ಕಡಿದು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಅತಿಯಾದ ತಂತ್ರಜ್ಞಾನದ ಬಳಕೆಯಿಂದ ಶಿಕ್ಷಣದ ತತ್ವಜ್ಞಾನ ನಾಶವಾಗುತ್ತಿದೆ. ತಂತ್ರಜ್ಞಾನ ಎಂದಿಗೂ ತತ್ವಜ್ಞಾನವನ್ನು ನಾಶ ಮಾಡಬಾರದು. ಸಾಹಿತ್ಯ, ಚರಿತ್ರೆ, ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ತತ್ವಜ್ಞಾನ ಇರುತ್ತದೆ. ತಂತ್ರಜ್ಞಾನ ಮನುಷ್ಯ ಸಂವಾದವನ್ನು ನಾಶ ಮಾಡಿದರೆ ಅದು ಶಿಕ್ಷಣ ತತ್ವಜ್ಞಾನವನ್ನೇ ನಾಶ ಮಾಡಿದಂತೆ. ಶಿಕ್ಷಣ ಎಂಬುದು ಮಾನವೀಯತೆಯಿಂದ ಕೂಡಿದ ಮನುಷ್ಯ ಸಂವಾದದ ವಾತಾವರಣ ಸೃಷ್ಟಿಸಬೇಕು. ಅಂತಹ ವಾತಾವರಣದಲ್ಲಿ ಮಾತ್ರ ಉತ್ತಮ ಗುರು ಹಾಗೂ ಶಿಷ್ಯರ ಹುಟ್ಟಲು ಸಾಧ್ಯ. ತರಗತಿಯೊಳಗಿರುವ ಸ್ಪಂದನಶೀಲತೆಯನ್ನು ಎಂದಿಗೂ ನಾಶ ಮಾಡಬಾರದು ಎಂದು ಹೇಳಿದರು.
ಗುರು ಹಾಗೂ ಶಿಷ್ಯ ಸಂಬಂಧ ಎಷ್ಟು ಮುಖ್ಯ ಎಂಬುದನ್ನು ನಾಗರಾಜ್ ರಚನೆಯ ‘ಗುರುವೆ ನಿಮಗೆ ಶರಣು’ ಕೃತಿ ತೋರಿಸುತ್ತದೆ. ಪ್ರಸ್ತುತ ಶಿಕ್ಷಣ ಎಂಬುದು ಸೇವೆ ಬದಲಿಗೆ ಉದ್ಯಮವಾಗಿದೆ. ಮೊದಲು ಶಿಕ್ಷಣ ಕ್ಷೇತ್ರವನ್ನು ಸೇವಾ ಕ್ಷೇತ್ರ ಎಂದು ಭಾವಿಸಿಕೊಂಡಿದ್ದೆವು. ಆದರೆ, ಪ್ರಸ್ತುತ ಅದು ಉದ್ಯಮವಾಗಿದೆ. ಎಲ್ಲಿಯವರೆಗೆ ಜ್ಞಾನಮುಖಿ ಶಿಕ್ಷಣ ಇರಬೇಕು? ಎಲ್ಲಿಯವರೆಗೆ ಉದ್ಯಮಮುಖಿ ಶಿಕ್ಷಣ ಇರಬೇಕು ಎಂಬುದನ್ನು ಸರ್ಕಾರ ಇದುವರೆಗೂ ನಿರ್ಧಾರ ಮಾಡಿಲ್ಲ. ಒಂದನೇ ತರಗತಿಯಿಂದಲೇ ಉದ್ಯಮಮುಖಿಯಾಗಬೇಕು ಎಂಬ ಚಿಂತನೆಯನ್ನು ಮಕ್ಕಳಲ್ಲಿ ಬಿತ್ತುತ್ತಿರುವುದು ದುರಂತ. ಹಾಗಂತ ಉದ್ಯಮ ಬೇಡ ಎಂದು ನಾನು ಹೇಳುತ್ತಿಲ್ಲ. ಆದರೆ, ಶಿಕ್ಷಣದ ಯಾವ ಹಂತದಿಂದ ಉದ್ಯಮಮುಖಿಯಾಗಬೇಕು ಎಂಬುದನ್ನು ನಿರ್ಧರಿಸುವ ಅವಶ್ಯಕತೆ ಇದೆ. ಇಂತಹ ಖಚಿತ ನಿಲುವನ್ನು ಇದುವರೆಗೆ ಯಾವುದೇ ಶಿಕ್ಷಣ ನೀಡಿ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ ಇದುವರೆಗೂ ಸಮಾನ ಶಿಕ್ಷಣ ನೀತಿ ಜಾರಿಯಾಗಲು ಸಾಧ್ಯವಾಗಿಲ್ಲ. ಯಾರು ಎಲ್‌ಕೆಜಿಗೆ ಹೋಗುತ್ತಾರೆ, ಯಾರು ಅಂಗನವಾಡಿಗೆ ಹೋಗುತ್ತಾರೆ ಎಂಬುದನ್ನು ನೋಡಿದರೆ ಶಿಕ್ಷಣ ಅಸಮಾನತೆ ಗುರುತಿಸಬಹುದು. ಪ್ರಸ್ತುತ ವಿದ್ಯಾಸಂಸ್ಥೆಗಳನ್ನು ನಡೆಸು ವವರೇ ಶಿಕ್ಷಣ ತಜ್ಞರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಅವರ‌್ಯಾರು ಸಹ ಶಿಕ್ಷಣ ತಜ್ಞರಲ್ಲ, ಅವರು ಶಿಕ್ಷಣೋದ್ಯಮಿಗಳು. ಶಿಕ್ಷಣ ತಜ್ಞರ ಜಾಗವನ್ನು ಶಿಕ್ಷಣೋದ್ಯಮಿಗಳು ಆಕ್ರಮಿಸಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬಂಧ ಹಾಳಾಗಲು ಈ ಒಂದು ಅಂಶ ಸಹ ಕಾರಣ ಎಂದರು.
ಸರ್ಕಾರಿ ಬಸ್ ಡ್ರೈವರ್ ಆಗಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ, ನನಗೆ ಗುರುಗಳು ಮಾರ್ಗದರ್ಶ ಮಾಡಿದ ಪರಿಣಾಮ ನಾನು ಪ್ರಾಧ್ಯಾಪಕನಾದೆ. ಹಾಗಾಗಿ ಗುರುಗಳ ಮಾರ್ಗದರ್ಶನ ತುಂಬಾ ಮುಖ್ಯ. ನನಗೆ ಗುರುಗಳ ಮಾರ್ಗದರ್ಶನ ದೊರೆಯದೆ ಹೋಗಿದ್ದರೆ ನಾನು ಇಂದು ಈ ಎತ್ತರಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ವಿವಾದವಿಲ್ಲದ ವಿಶ್ವವಿದ್ಯಾಲಯಗಳು ಇಲ್ಲ ಎಂಬಂ ತಾಗಿದೆ. ವಿವಾದವಿಲ್ಲದ ವಿಶ್ವ ವಿದ್ಯಾಲಯವನ್ನು ಗುರುತಿಸುವುದು ಸಾವಿಲ್ಲದ ಮನೆಯಿಂದ ಸಾಸಿವೆ ತಂದಷ್ಟೇ ಕಷ್ಟ. ಇಂತಹ ಸಂದರ್ಭದಲ್ಲಿ ನನ್ನ ಜಾತಿ ಯಾವುದು ಎಂದು ನೋಡದೆ ನನಗೆ ಪ್ರೋತ್ಸಾಹ ನೀಡಿದ ಗುರುಗಳನ್ನು ಸ್ಮರಿಸಿಕೊಳ್ಳುವುದು ಅತ್ಯಂತ ಮುಖ್ಯ. ಇತ್ತೀಚೆಗೆ ವಿದ್ಯಾವಂತವರಲ್ಲಿ ಜಾತಿವಾದ ಹೆಚ್ಚಾಗುತ್ತಿದೆ. ವಿದ್ಯಾವಂತರಲ್ಲಿ ಧಾರ್ಮಿಕ ಮೂಲಭೂತವಾದ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಧತ್ವ ಹೊಂದಿರುವ ಅನೇಕರು ವಿಶ್ವದಲ್ಲಿ ಹಲವು ಸಾಧನೆ ಮಾಡಿರುವ ಉದಾಹರಣೆಗಳು ಇವೆ. ನಮ್ಮ ರಾಜ್ಯದಲ್ಲೂ ಅಂಧರು ತಮ್ಮ ವಿಶೇಷ ಕಣ್ಣಿನಿಂದ ಜಗತ್ತನ್ನು ನೋಡಿ ಸಾಧನೆ ತೋರಿದವರು ಇದ್ದಾರೆ. ಆ ಸಾಲಿನಲ್ಲಿ ಅಂಧತ್ವ ಹೊಂದಿರುವ ನಾಗರಾಜ್ ಸೇರುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದ ಸಂದರ್ಭ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಂಧರ ಕವಿಗೋಷ್ಠಿ ನಡೆಸಿದ್ದೆ. ಅದರ ಫಲವಾಗಿ ಇಬ್ಬರು ಕವಿಗಳು ಉತ್ತಮ ಕವಿತೆಗಳನ್ನು ರಚಿಸುತ್ತಿದ್ದಾರೆ ಎಂದು ಹೇಳಿದರು.
ಭಾಷಾತಜ್ಞ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ಕಣ್ಣು ಇರುವವರು ಸಮಾಜವನ್ನು ಸರಿಯಾಗಿ ನೋಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಕಣ್ಣು ಇರುವವರು ಎದುಗಿರುವ ವ್ಯಕ್ತಿ ಯಾವ ಜಾತಿ, ಆತನ ಬಣ್ಣದ ಆಧಾರದಲ್ಲಿ ಸಂವಾದ ನಡೆಸುತ್ತಾರೆ. ಆದರೆ, ಅಂಧರು ತಮ್ಮ ಒಳಗಣ್ಣಿನಿಂದ ಸಮಾಜ ನೋಡುತ್ತಾರೆ. ಹೀಗಾಗಿ ಅಂಧರು ಸಮಾಜವನ್ನು ಸರಿಯಾಗಿ ಗ್ರಹಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ.ಸೋಮಣ್ಣ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ. ಗೋವಿಂದೇಗೌಡ, ಲೇಖಕ ಡಾ.ಪಿ.ವಿ. ನಾಗರಾಜ, ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಮಹಾರಾಜ ಕಾಲೇಜು ಪ್ರಾಧ್ಯಾಪಕಿ ಪ್ರೊ.ಬಿ.ಪಿ. ಆಶಾಕುಮಾರಿ, ರೇಖಾ ಪ್ರಕಾಶನ ಮಾಲೀಕ ಓಂಕಾರಪ್ಪ ಹಾಗೂ ಇತರರು ಇದ್ದರು.