ಮಿತಿಮೀರಿದೆ ಪ್ಲಾಸ್ಟಿಕ್​ ಬಳಕೆ, ಮಾರಾಟ!

Untitled-1
Published on

ಜಿ.ಕೆ.ಸುಗ್ಗರಾಜು ನೆಲಮಂಗಲ

ಪ್ಲ್ಲಾಸ್ಟಿಕ್​ ಮಾಲಿನ್ಯ ಕೊನೆಗೊಳಿಸುವ ಘೋಷವಾಕ್ಯದೊಂದಿಗೆ ಈ ವರ್ಷದ ಪರಿಸರ ದಿನ ಆಚರಿಸಿದ್ದೇ ಸುಳ್ಳು ಎಂಬಂತೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಿಷೇಧಿತ ಪ್ಲಾಸ್ಟಿಕ್​ ಬಳಕೆ ಹಾಗೂ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಅಪಾಯಕಾರಿ ಪ್ಲಾಸ್ಟಿಕ್​ ತ್ಯಾಜ್ಯ ನಗರದ ತುಂಬೆಲ್ಲ ಅವರಿಸಿಕೊಂಡಿದೆ.

ಜನ&ಜಾನುವಾರು ಹಾಗೂ ಪ್ರಕೃತಿಗೆ ಮಾರಕವಾದ 40 ಮೈಕ್ರಾನ್​ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್​ ಉತ್ಪಾದನೆ ಹಾಗೂ ಮಾರಾಟವನ್ನು ಕೇಂದ್ರ ಪರಿಸರ ಇಲಾಖೆ ನಿಷೇಧಿಸಿದೆ. ನಿಯಮ ಪಾಲಿಸದ ಮಾರಾಟಗಾರರು ಮತ್ತು ಉತ್ಪಾದಕರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲೂ ಅವಕಾಶ ನೀಡಲಾಗಿದೆ. ಆದರೆ ನಗರದ ಪ್ರತಿ ಬಡಾವಣೆಗಳ ಸಣ್ಣ ಅಂಗಡಿ ಹಾಗೂ ಹೋಟೆಲ್​ಗಳಲ್ಲಿ ಪ್ಲಾಸ್ಟಿಕ್​ ಮಾರಾಟ ನಡೆಯುತ್ತಿದ್ದು, ಎಲ್ಲೆಡೆ

ಪ್ಲಾಸ್ಟಿಕ್​ ಹಾವಳಿ ಮಿತಿಮೀರಿದೆ.

ಸಾರ್ವಜನಿಕರಿಗೆ ಅರಿವು: ನಗರ ಸೇರಿ ಗ್ರಾಮೀಣ ಭಾಗದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ, ಬಸ್​ ನಿಲ್ದಾಣದ ಸುತ್ತಮುತ್ತ, ರಸ್ತೆಯ ಬೀದಿಬದಿ ಹೋಟೆಲ್​ಗಳು ಸೇರಿ ರೆಸ್ಟೋರೆಂಟ್​ಗಳಲ್ಲಿ ಅವ್ಯಾಹತವಾಗಿ ಪ್ಲಾಸ್ಟಿಕ್​ ಬಳಕೆಯಾಗುತ್ತಿದೆ. ಈ ವಿಚಾರ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಗರಸಭೆಯಿಂದ ಆರಂಭದಲ್ಲಿ ಪ್ಲಾಸ್ಟಿಕ್​ ಬಳಕೆಯ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದು, ಅಲ್ಪ ಪ್ರಮಾಣದಲ್ಲಿ ಪ್ಲಾಸ್ಟಿಕ್​ ಬಳಕೆಗೆ ಕಡಿವಾಣವೂ ಬಿದ್ದಿತ್ತು. ಇದೀಗ ಮತ್ತೆ ಪ್ಲಾಸ್ಟಿಕ್​ ಹಾವಳಿ ಹೆಚ್ಚಾಗಿದೆ. ನಗರಸಭೆ ಸಾರ್ವಜನಿಕರಿಗೆ ಪ್ಲಾಸ್ಟಿಕ್​ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಹಾಗೂ ನಗರದ ಸ್ವಚ್ಛತೆಯ ಕುರಿತು ಅರಿವು ಮೂಡಿಸುತ್ತಿದ್ದರೂ ಪ್ಲಾಸ್ಟಿಕ್​ ಬಳಕೆ ಕಡಿಮೆಯಾಗಿಲ್ಲ. ಕಾನೂನು ಜಾರಿಯಾಗಿ ಹಲವು ವರ್ಷಗಳು ಕಳೆದರೂ ಮಾರುಕಟ್ಟೆ, ಚಿಲ್ಲರೆ ಅಂಗಡಿ, ಬೀದಿ ಬದಿ 40 ಮೈಕ್ರಾನ್​ಗಿಂತಲೂ ಕಡಿಮೆಯ ಅತಿ ಕಳಪೆ ಪ್ಲಾಸ್ಟಿಕ್​ ಮಾರಾಟ ಮಾಡಲಾಗುತ್ತಿದೆ. ಜನರು ಕೂಡ ಪ್ಲಾಸ್ಟಿಕ್​ ಕವರ್​ಗಳನ್ನು ಪಡೆಯುತ್ತಿರುವುದರಿಂದ ಪ್ಲಾಸ್ಟಿಕ್​ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಜಾನುವಾರು ಜೀವಕ್ಕೆ ಕುತ್ತು: ನಗರದ ಎಲ್ಲೆಂದರರಲ್ಲಿ ಬಿದ್ದಿರುವ ಪ್ಲಾಸ್ಟಿಕ್​ನಿಂದ ಪ್ರಾಣಿಗಳ ಜೀವಕ್ಕೆ ಕುತ್ತು ಎದುರಾಗಿದೆ. ಪ್ಲಾಸ್ಟಿಕ್​ ಕವರ್​ನಲ್ಲಿ ಬಿಸಾಡುವ ಅಳಿದುಳಿದ ಆಹಾರ ತಿನ್ನುವಾಗ ಪೂರ್ತಿ ಪ್ಲಾಸ್ಟಿಕ್​ ಜಾನುವಾರುಗಳ ಹೊಟ್ಟೆ ಸೇರುತ್ತಿದ್ದು ಪ್ರಾಣಕ್ಕೆ ಕಂಟಕವಾಗುತ್ತಿದೆ. ಪ್ಲಾಸ್ಟಿಕ್​ ನಿಮೂರ್ಲನೆಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕೆಂದು

ಸ್ಥಳಿಯರು ಒತ್ತಾಯಿಸಿದ್ದಾರೆ.

ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್​ ಕಣ : ಕಳಪೆಯಾಗಿರುವ ಪ್ಲಾಸ್ಟಿಕ್​ ಕವರ್​ಗಳಲ್ಲಿ ಬಿಸಿಯಾದ ಆಹಾರ ಹಾಕುವುದರಿಂದ ಪ್ಲಾಸ್ಟಿಕ್​ನಲ್ಲಿರುವ ವಿಷಕಾರಿ ರಾಸಾಯನಿಕಗಳಿಂದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಅಧಿಕ ರಕ್ತದೊತ್ತಡ, ರಕ್ತನಾಳಗಳಲ್ಲಿ ಸಮಸ್ಯೆ ಪ್ಲಾಸ್ಟಿಕ್​ ಕಾಣಿಸಿಕೊಳ್ಳುತ್ತಿವೆ. ಸುಡುವುದರಿಂದಲೂ ಪೊಜೀನ್​, ಕ್ಲೋರಿನ್​, ಗಂಧಕ, ಸಾರಜನಕಗಳಂತಹ ವಿಷ ಅನಿಲಗಳು ಮನುಷ್ಯನ ಶ್ವಾಸಕೋಶ ಸೇರಿ ಬಂಜೆತನ, ಕ್ಯಾನ್ಸರ್​ ಹಾಗೂ ಗರ್ಭಾಶಯದೊಳಗೆ ಸಮಸ್ಯೆಗಳು ಎದುರಾಗುತ್ತಿವೆ.

ಅಧಿಕಾರಿಗಳಿಂದ ಪ್ಲಾಸ್ಟಿಕ್​ ಅಂಗಡಿಮೇಲೆ ದಾಳಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಗರಸಭೆಯಿಂದ ನಗರದ ವಿವಿಧೆಡೆ ಪ್ಲಾಸ್ಟಿಕ್​ ಮಾರಾಟ ಮಾಡುವ ಅಂಗಡಿ ಹಾಗೂ ಮಳಿಗೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್​ ವಶಪಡಿಸಿಕೊಂಡು ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ನಂತರ ಅಂಗಡಿಯವರು ಮತ್ತೆ ಪ್ಲಾಸ್ಟಿಕ್​ ಮಾರಾಟ ಮಾಡುವುದು ಕಂಡು ಬರುತ್ತಿದೆ. ಅಧಿಕಾರಿಗಳು ಕಾಟಚಾರಕ್ಕೆ ಪ್ಲಾಸ್ಟಿಕ್​ ಅಂಗಡಿಗಳಮೇಲೆ ದಾಳಿ ಮಾಡಿ ದಂಡ ಮಾತ್ರ ವಿಧಿಸುತ್ತಿದ್ದಾರೆ. ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಿದರೇ ಮಾರಾಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಸಾರ್ವಜನಿಕರ ಒತ್ತಾಯ : ಇಡ್ಲಿ, ದೋಸೆ, ಫಲಾವ್​, ಕಾಫಿ, ಟೀ, ಹಾಲು ಸೇರಿ ತೀರಾ ಬಿಸಿಯಾದ ಆಹಾರ ಪದಾರ್ಥಗಳನ್ನು ಪಾರ್ಸೆಲ್​ ಕಟ್ಟಿಕೊಡಲು ಕಳಪೆ ಪ್ಲಾಸ್ಟಿಕ್​ ಕವರ್​ ಬಳಕೆ ಮಾಡುತ್ತಿದ್ದಾರೆ. ಇಡ್ಲಿ ಬೇಯಿಸಲು ಪ್ಲಾಸ್ಟಿಕ್​ ಕವರ್​ ಬಳಕೆ ಮಾಡುತ್ತಿದ್ದಾರೆ. ಇದರಿಂದ ಅಪಾಯಕಾರಿ ಪ್ಲಾಸ್ಟಿಕ್​ ಜನರ ದೇಹ ಸೇರುತ್ತಿದೆ. ಆದ್ದರಿಂದ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್​ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ಲಾಸ್ಟಿಕ್​ ಹಾವಳಿ ಮಿತಿ ಮೀರಿದ್ದು ರೋಗ&ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಿದೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಕೂಡಲೇ ಪ್ಲಾಸ್ಟಿಕ್​ಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ. | ಯಲಚಗೆರೆ ಮೂರ್ತಿ ಗ್ರಾಹಕ ಪ್ಲಾಸ್ಟಿಕ್​ ಬಳಕೆಗೆ ಕಡಿವಾಣ ಹಾಕುವ ಕುರಿತು ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಸೂಲಿ ಮಾಡುತ್ತಿದ್ದರೂ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ಪ್ಲಾಸ್ಟಿಕ್​ ಉತ್ಪಾದನೆ ಮಾಡುವ ಕಾರ್ಖಾನೆಗಳನ್ನು ಬಂದ್​ ಮಾಡುವ ಕಾರ್ಯ ಸರ್ಕಾರದ ಹಂತದಲ್ಲೇ ನಡೆದರೆ ಪ್ಲಾಸ್ಟಿಕ್​ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿದೆ. | ಎನ್​.ಗಣೇಶ್​ ನಗರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net