ಸ್ವಯಂಕೃತ ಅಪರಾಧದಿಂದ ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಳ

03slb3
ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ವನಮಹೋತ್ಸವಕ್ಕೆ ಶಾಸಕ ಶರತ್‌ಬಚ್ಚೇಗೌಡ, ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ ಚಾಲನೆ ನೀಡಿದರು. ಅರಣ್ಯ ಇಲಾಖಾಧಿಕಾರಿ ಪುಷ್ಪಾ, ಗ್ರಾಪಂ ಅಧ್ಯಕ್ಷೆ ಶಿವಕುಮಾರಿ ಇತರರು ಇದ್ದರು.
Published on

ಬೆಂಡಿಗಾನಹಳ್ಳಿಯಲ್ಲಿನ ವನಮಹೋತ್ಸವದಲ್ಲಿ ಶರತ್ ಬಚ್ಚೇಗೌಡ ಹೇಳಿಕೆ- ಅರಣ್ಯೀಕರಣಕ್ಕೆ ಆದ್ಯತೆ ನೀಡಲು ಸಲಹೆ

ಸೂಲಿಬೆಲೆ: ನಮ್ಮ ತಪ್ಪುಗಳಿಂದ ಭೂಮಿ ಫಲವತ್ತತೆ ಕಳೆದುಕೊಂಡು ಸೇವಿಸುವ ಆಹಾರ ವಿಷಯಮಯವಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಕಳವಳ ವ್ಯಕ್ತಪಡಿಸಿದರು.

ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಾಂತರ ಜಿಲ್ಲೆಯಲ್ಲಿನ ಹವಾಮಾನ ವೈಪರೀತ್ಯದಿಂದ ಜೀವ ಸಂಕುಲಗಳು ಕಷ್ಟದಲ್ಲಿವೆ. ಅತಿಯಾದ ಮಳೆ, ಬಿಸಿಲು ಮತ್ತು ಭರ ದೇವರು ಕಟ್ಟ ಶಾಪವೋ, ವರವೋ ಎಂಬಂತಾಗಿದೆ. ಇದರಲ್ಲಿ ಸ್ವಯಂಕೃತ ಅಪರಾಧವೂ ಅಡಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಅಂತರ್ಜಲ ವೃದ್ದಿಯಾಗದೇ ತಾಪ ಹೆಚ್ಚಾಗಿ ವಾತಾವರಣ ಕಲ್ಮಶವಾಗಲು ಕಾರಣವಾಗಿರಬಹುದು. ಅರಣ್ಯ ಜಾಗವನ್ನು ದುರಪಯೋಗ ಮಾಡದಂತೆ ಕಾಪಾಡಿಕೊಂಡು ಅರಣ್ಯೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಅಧುನಿಕತೆಯ ಭರಾಟೆಯಲ್ಲಿ ಮರಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಬೆಳೆಯುವ ಹಣ್ಣು ತರಕಾರಿಗಳು ಕಲ್ಮಶವಾಗುತ್ತಿವೆ. ಆದ್ದರಿಂದ ಸಾರ್ವಜನಿಕರು ಹೆಚ್ಚು ಗಿಡ ಮರಗಳ ರಕ್ಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪುಷ್ಪಾ, ಗ್ರಾಪಂ ಅಧ್ಯಕ್ಷೆ ಶಿವಕುಮಾರಿ, ತಾಪಂ ಮಾಜಿ ಅಧ್ಯಕ್ಷ ಟಿ.ಎಸ್.ರಾಜಶೇಖರ್, ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಗುಳ್ಳಹಳ್ಳಿ ಮುನಿಯಪ್ಪ, ಸರ್ಕಾರಿ ಆಸ್ಪತ್ರೆ ಡಾ.ಪರ್ವಿನ್‌ತಾಜ್, ಕಂಬಳೀಪುರ ಗ್ರಾಪಂ ಮಾಜಿ ಅಧ್ಯಕ್ಷ ಆನಂದಪ್ಪ, ತಾಪಂ ಮಾಜಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ, ಡಿ.ಟಿ.ವೆಂಕಟೇಶ್, ಹೊಸಹಳ್ಳಿ ಜಯರಾಮ್, ಗ್ರಾಪಂ ಸದಸ್ಯ ಬೈರೇಗೌಡ, ಸೋಮಣ್ಣ, ಈರಣ್ಣ ಇತರರು ಇದ್ದರು.

ಸರಾಸರಿ 2 ರಿಂದ 3 ಟಿಎಂಸಿ ಮಳೆಯಾಗಬೇಕಾದ ಪ್ರದೇಶಗಳಲ್ಲಿ ಕೇವಲ 500 ರಿಂದ 700 ಮಿ.ಮೀ. ಮಳೆಯಾಗುತ್ತಿದ್ದು, ನಾವು ಭೂಮಿಯಿಂದ 1 ಟಿಎಂಸಿ ಗಿಂತ ಹೆಚ್ಚು ನೀರು ಹೊರ ತೆಗೆಯುತ್ತಿದ್ದೇವೆ. ನಾನಾ ರೀತಿಯಲ್ಲಿ ನೀರು ಬಳಕೆಯಾಗುತ್ತಿದ್ದು, ಮಳೆಯ ನೀರನ್ನು ಮತ್ತೆ ಭೂಮಿಗೆ ಹಿಂಗಿಸುವ ಕೆಲಸವಾಗಬೇಕಾಗಿದೆ. ಮಳೆಯ ಪ್ರಮಾಣ ಕುಸಿಯಲು ಮರಗಿಡಗಳ ನಾಶವೇ ಕಾರಣ. ಯುವ ಸಮುದಾಯ ಪರಿಸರ ಕಾಳಜಿ ಬೆಳಸಿಕೊಳ್ಳಲು ಸಾರ್ವಜನಿಕರು ಹೆಚ್ಚು ಮರಗಿಡಗಳನ್ನು ನೆಡಬೇಕು. -ಶರತ್‌ಬಚ್ಚೇಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net