

ಮೈಸೂರು: ಅಧಿಕ ಔಷಧ ಸೇವನೆಯಿಂದಾಗಿ ಮನುಷ್ಯ ಅನಾರೋಗ್ಯ ಪೀಡಿತನಾಗುತ್ತಿದ್ದಾನೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್ ಹೇಳಿದರು.
ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯವಸಾಯಕ್ಕೆ ಉಪಯೋಗಿಸುತ್ತಿರುವ ಕೀಟನಾಶಕಗಳು ಆಹಾರ ಪದಾರ್ಥದೊಂದಿಗೆ ಮನುಷ್ಯನ ಸ್ವಾಯತ್ತೆ ಕ್ರಿಯೆಗೆ ಧಕ್ಕೆ ಉಂಟಾಗುತ್ತಿದೆ. ಇದು ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. ಆಹಾರ ಉತ್ಪಾದನೆಯಲ್ಲಿ ರೋಗ ನಿರೋಧಕ ವಂಶವಾಹಿ ತಂತ್ರಜ್ಞಾನದ ತಳಿಗಳನ್ನು ಅಭಿವೃದ್ಧಿಪಡಿಸುವುದರಿಂದ ಕೀಟನಾಶಕಗಳ ಉಪಯೋಗವನ್ನು ಕಡಿಮೆ ಮಾಡಬಹುದು ಎಂದರು.
ಈಗಾಗಲೇ ಈ ದಿಕ್ಕಿನಲ್ಲಿ ಸಂಶೋಧನೆಗಳು ನಡೆಯುತ್ತಿದ್ದು, ಹಲವಾರು ದೇಶಗಳು ರೋಗ ನಿರೋಧಕ ವಂಶವಾಹಿ ಆಹಾರ ಪದಾರ್ಥಗಳ ಉತ್ಪಾದನೆಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ನಮ್ಮ ದೇಶವೂ ಸಹ ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.
ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವೆಂದರೆ ಕೇವಲ ಕಾಯಿಲೆ ರಹಿತ ಸ್ಥಿತಿಯಲ್ಲ. ಅದು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕಗಳ ಸುಸ್ಥಿತಿ ಆಗಿದೆ. ಈ ಎಲ್ಲ ಆರೋಗ್ಯದ ಪ್ರಕಾರಗಳನ್ನು ನಿಯಂತ್ರಿಸುವ ಆಹಾರ, ವ್ಯಾಯಾಮ, ದುಶ್ಚಟಗಳ ರಹಿತ ಬದುಕು, ನೆಮ್ಮದಿಯ ಜೀವನಶೈಲಿ ಮೈಗೂಡಿಸಿಕೊಳ್ಳಬೇಕು ಎಂದರು.
ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಪ್ರಾರಂಭವಾದ ಏ.7ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಿದ್ದು, ಈ ವರ್ಷದ ಘೋಷಣೆ ‘ನನ್ನ ಆರೋಗ್ಯ, ನನ್ನ ಹಕ್ಕು’ ಎಂಬುದಾಗಿದ್ದು, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಜಾಗೃತರಾದರೆ ಮಾತ್ರ ಆರೋಗ್ಯ ವೃದ್ಧಿ ಸಾಧ್ಯ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಆರ್.ರಾಜೇಂದ್ರಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ, ಟ್ರಸ್ಟಿಗಳಾದ ಸುಧಾ ಯೋಗಣ್ಣ, ನಿರ್ದೇಶಕ ಡಾ.ಯಶಿತಾ ರಾಜ್ ಉಪಸ್ಥಿತರಿದ್ದರು.