

ಸವಣೂರ: ಸೇವೆಯಲ್ಲಿ ಒಳ್ಳೆಯದು, ಕೆಟ್ಟದು ಎಂಬುದು ಇರಲು ಸಾಧ್ಯವಿಲ್ಲ. ದಾದಿಯರ ಸೇವೆಗೆ ಸರಿಸಮವಾಗಿ ಮತ್ತೊಂದಿಲ್ಲ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ಹೇಳಿದರು.
ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನಾಚರಣೆ ಹಾಗೂ ದಾದಿಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರ ಸೇವೆಯ ನಂತರ ದಾದಿಯರು ಕೈಗೊಳ್ಳುವ ಸೇವೆಯಿಂದ ರೋಗಿಗಳು ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗಿದೆ. ವೈಯಕ್ತಿಕ ಒತ್ತಡಗಳ ನಡುವೆ ದಾದಿಯರು ರೋಗಿಗಳ ಸೇವೆ ಕೈಗೊಳ್ಳುವುದು ಶ್ಲಾಘನೀಯವಾಗಿದೆ ಎಂದರು.
ನಿವೃತ್ತ ಶುಶ್ರೂಷಾಧಿಕಾರಿಗಳಾದ ನಿರ್ಮಲಾ ಪಾಟೀಲ, ನಸೀಮಾ ಇನಾಮದಾರ ಹಾಗೂ ಶೋಭಾ ಕೊಂಗಿ ಸೇರಿದಂತೆ ಒಟ್ಟು 32 ಶುಶ್ರೂಷಾಧಿಕಾರಿಗಳನ್ನು ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವೈದ್ಯರಾದ ಡಾ. ನಟರಾಜ, ಡಾ. ವೀರೇಶ ಮಠಪತಿ, ಡಾ. ಚನ್ನಬಸವ ಹುಲ್ಲತ್ತಿ, ಡಾ. ಅನೂಪ ರಾಯ್ಕರ್, ಡಾ. ಪುಷ್ಪಲತಾ, ಡಾ. ಸ್ಮಿತಾ, ಶುಶ್ರೂಷಾಧಿಕಾರಿ ವೀಣಾ ಇನಾಮತಿ, ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಬಸವರಾಜ ಚಳ್ಳಾಳ ಇತರರಿದ್ದರು.
ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ವಿದ್ಯಾಧರ ಕುತನಿ, ತೇಜಸ್ವಿನಿ ಕೊಂಡಿ ಹಾಗೂ ಸುನಂದಾ ಚಿನ್ನಾಪೂರ ಕಾರ್ಯಕ್ರಮ ನಿರ್ವಹಿಸಿದರು.