ಸ್ವಾಮಿ ರಘುವೀರಾನಂದ ಮಹಾರಾಜರಿಂದ ಅಮೋಘ ಕಾರ್ಯ

h5-ramakrishna
Published on

ಹುಬ್ಬಳ್ಳಿ: ತ್ಯಾಗ ಮತ್ತು ಸೇವೆಯ ಮೂಲಕ ಜನಮನ್ನಣೆ ಗಳಿಸಿದವರು ಸ್ವಾಮಿ ರಘುವೀರಾನಂದ ಮಹಾರಾಜರು. ಸಮಾಜದ ಉನ್ನತಿಗೆ ಅವರು ಅಮೋಘ ಕಾರ್ಯ ಮಾಡಿದ್ದಾರೆ. ಅವರ ಚಿಂತನೆಗಳು ಮುಂದುವರಿಯಲಿವೆ ಎಂದು ವಿಜಯಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮ ವತಿಯಿಂದ ಇಲ್ಲಿಯ ಕಲ್ಯಾಣ ನಗರದ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾಮಿ ರಘುವೀರಾನಂದ ಮಹಾರಾಜರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ಭಕ್ತ ಸಮೂಹವನ್ನೇ ಸಂಪಾದಿಸಿದ್ದರು. ಅವರು ನಮ್ಮ ಮಧ್ಯೆ ಇಲ್ಲವೆಂಬ ಭಾವನೆಯೇ ಇಲ್ಲ. ಅವರು ಚಿರಂತನ ಎಂದು ಅಭಿಪ್ರಾಯಪಟ್ಟರು.
ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸ್ವಾಮಿ ರಘುವೀರಾನಂದ ಮಹಾರಾಜರು ದಿವ್ಯ ತ್ರಯರ ಸಂದೇಶ ಸಾರಲು ಹಾಗೂ ಸಮಾಜ ಜಾಗೃತಗೊಳಿಸಲು ಸನ್ನದ್ಧರಾಗಿದ್ದರು. ತಡಸ ಬಳಿ ಜಾಗ ಖರೀದಿ ಮಾಡಿ ಶ್ರೇಷ್ಠ ತಾಣವಾಗಿ ಮಾಡಲಾರಂಭಿಸಿದ್ದರು. ಅವರ ಕಲ್ಪನೆಯೇ ಅಮೋಘ ಮತ್ತು ಅತ್ಯದ್ಭುತ. ಇದಕ್ಕೆ ಭಕ್ತರು ಪೂರಕವಾಗಿ ಕೆಲಸ ಮಾಡಬೇಕು ಎಂದರು.
ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವೀರೇಶಾನಂದ ಮಹಾರಾಜರು ಮಾತನಾಡಿ, ತತ್ವಜ್ಞಾನಿಗಳು ಮತ್ತು ಸಂತರು ನಿಜವಾದ ಕ್ರಾಂತಿಕಾರಿಗಳು. ಅವರು ಕೈಗೊಂಡ ಕಾರ್ಯಗಳು ಪರಮಾತ್ಮನನ್ನು ಮೆಚ್ಚಿಸುತ್ತಿವೆ. ರಘುವೀರಾನಂದ ಮಹಾರಾಜರು ನವರಾತ್ರಿ ನವಿಲುಗರಿ ಇಟ್ಟು ಹುಬ್ಬಳ್ಳಿ ಹಿರಿಮೆ ಹೆಚ್ಚಿಸಿದ್ದಾರೆ ಎಂದು ಹೇಳುತ್ತ ಗದ್ಗದಿತರಾದರು.
ದಾವಣಗೆರೆ ರಾಮಕೃಷ್ಣ ಮಿಷನ್‌ನ ಶ್ರೀ ತ್ಯಾಗೀಶ್ವರಾನಂದ ಮಹಾರಾಜರು ಮಾತನಾಡಿದರು.
ಸಾಹಿತ್ಯ ಭಂಡಾರದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉತ್ತರಾಧಿಕಾರಿ ನೇಮಕ: ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಶ್ರೀ ರಘುವೀರಾನಂದ ಮಹಾರಾಜರ ಉತ್ತರಾಧಿಕಾರಿಯನ್ನಾಗಿ ಶ್ರೀ ಸ್ವಾಮಿ ತೇಜಸಾನಂದ ಮಹಾರಾಜರನ್ನು ನಿರ್ಭಯಾನಂದ ಸ್ವಾಮೀಜಿ ಘೋಷಿಸಿದರು.
ರಘುವೀರಾನಂದ ಮಹಾರಾಜರು ತಮ್ಮ ಅನಾರೋಗ್ಯ ಹಿನ್ನೆಲೆಯಲ್ಲಿ ಬರೆಸಿಟ್ಟಿದ್ದ ಉಯಿಲು (ವಿಲ್) ಅನ್ನು ನಿರ್ಭಯಾನಂದ ಸ್ವಾಮೀಜಿ ಬಹಿರಂಗ ಸಭೆಯಲ್ಲಿ ಓದಿದರು. ನಂತರ ಸಚಿವ ಎಚ್.ಕೆ. ಪಾಟೀಲ ಅವರ ಮೂಲಕ ಉತ್ತರಾಧಿಕಾರಿ ಸ್ವಾಮಿ ತೇಜಸಾನಂದ ಮಹಾರಾಜರಿಗೆ ಹಸ್ತಾಂತರಿಸಿದರು.
ಶ್ರೀ ಸ್ವಾಮಿ ಪ್ರಕಾಶಾನಂದ ಮಹಾರಾಜ, ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ, ಮನಗುಂಡಿ ಶ್ರೀ ಬಸವಾನಂದ ಸ್ವಾಮೀಜಿ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ವಿವಿಧ ಮಠದ ಯತಿಗಳು, ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net